

ಮದ್ದೂರು : ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಮೇ 31 ರಿಂದ ಶಾಲೆಗಳನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಬುಧವಾರ ಭೇಟಿ ನೀಡಿ ಶಾಲಾ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.
ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ಶಾಲಾ ಸ್ವಚ್ಛತಾ ಕಾರ್ಯ ಹಾಗೂ ಶಾಲಾ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ತರಗತಿ ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ ಆಹಾರ ಧಾನ್ಯಗಳ ಸ್ವಚ್ಛತೆ ಅಡುಗೆ ತಯಾರಿಕೆ ಪರಿಕರಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮೇ 31 ರಂದು ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾವರಣವನ್ನು ತಳಿರು ತೋರಣ, ರಂಗೋಲಿ ಇತ್ಯಾದಿ ಕ್ರಮಗಳನ್ನು ಅನುಸರಿಸಿ ಮಕ್ಕಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಶಾಲೆಗೆ ಆಹ್ವಾನಿಸಲು ಅಗತ್ಯ ಮಾರ್ಗದರ್ಶನ ನೀಡಿದೆ ಎಂದರು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಸದಸ್ಯರು ಮತ್ತು ಪಾಲಕರನ್ನು ಶಾಲೆಗೆ ಆಹ್ವಾನಿಸಿ ಗುಲಾಬಿ ಹೂವು ನೀಡುವುದರ ಮೂಲಕ ಮಕ್ಕಳನ್ನು ಸ್ವಾಗತಿಸುವುದು ಮತ್ತು ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲು ತಿಳಿಸಲಾಗಿದೆ. ಶಾಲಾ ಪ್ರಾರಂಭೋತ್ಸವ ದಿನದಂದೇ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳಾದ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಸ್ಥಳೀಯ ಎಸ್‌ಡಿಎಂಸಿ ಸಹಕಾರದಿಂದ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜೂನ್ ತಿಂಗಳ ಮೊದಲನೇ ವಾರ ಶಾಲಾ ದಾಖಲಾತಿ, ವಿಶೇಷ ದಾಖಲಾತಿ ಆಂದೋಲನ ಕೈಗೊಳ್ಳುವುದರ ಮೂಲಕ ಅರ್ಹ ವಯಸ್ಸಿನ ಎಲ್ಲ ಮಕ್ಕಳು ಶಾಲೆಗೆ ದಾಖಲು ಮತ್ತು ಶಾಲಾ ವ್ಯಾಪ್ತಿಯ ಪ್ರದೇಶಗಳಲ್ಲಿ ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾಥಾ, ಪ್ರಭಾತ್ ಪೇರಿ, ಮನೆ ಮನೆ ಭೇಟಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
2024ರ ಮಾರ್ಚ್ ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-01ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂ.14 ರಿಂದ ಪ್ರಾರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ -02ಕ್ಕೆ ಆಯಾ ಶಾಲೆಯ ವಿಷಯ ಬೋಧನಾ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಮೇ.29 ರಿಂದ ಜೂ.13 ವರೆಗೆ ನಡೆಸಲಾಗುವುದು. ಪರಿಹಾರ ಬೋಧನಾ ಕೇಂದ್ರದ ನೋಡಲ್ ಅಧಿಕಾರಿಗಳು ಮತ್ತು ಮೇಲ್ವಿಚಾರಕ ಅಧಿಕಾರಿಗಳು ನಿಯೋಜಿಸಲಾದ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ, ಮಾರ್ಗದರ್ಶನಗಳನ್ನು ನೀಡಿ ಫಲಿತಾಂಶವನ್ನು ಉತ್ತಮಪಡಿಸಲು ಶ್ರಮಿಸಬೇಕು ಎಂದು ಬಿಇಒ ಸಿ.ಎಚ್.ಕಾಳೀರಯ್ಯ ತಿಳಿಸಿದರು.
ಮುಖ್ಯ ಶಿಕ್ಷಕಿ ಸುಕನ್ಯಾ, ಶಿಕ್ಷಣ ಸಂಯೋಜಕ ಲೋಕೇಶ್, ಶಿಕ್ಷಕರಾದ ಬಸವೇಗೌಡ, ಕಿರಣ್‌ಕುಮಾರ್, ನಿಂಗರಾಜು, ಶೋಭಾ ಸೇರಿದಂತೆ ಇತರರು ಇದ್ದರು.