ಶೃಂಗೇರಿ ಶಂಕರಮಠದ ಏಕಾದಶ ವಾರ್ಷಿಕೋತ್ಸವ, ಜಗದ್ಗುರು ವಿಧುಶೇಖರಭಾರತಿ ಸ್ವಾಮೀಜಿ ಸ್ವಾಗತಕ್ಕೆ ಸಕಲ ಸಿದ್ಧತೆ

SHANAKAR MATHA PRESS MEET
ವಿಜಯಪುರ ನಗರದ ಶೃಂಗೇರಿ ಶಂಕರಮಠದಲ್ಲಿ ಮಹೇಶ ದೇಶಪಾಂಡೆ ಸುದ್ದಿಗೋಷ್ಠಿ ನಡೆಸಿದರು. ಶ್ಯಾಮಭಟ್ ಜೋಶಿ, ಕಿರಣ ಇನಾಮದಾರ, ಅಶೋಕ ಕಾರಜೋಳ ಮತ್ತಿತರರಿದ್ದಾರೆ.
Published on

ವಿಜಯಪುರ: ಶೃಂಗೇರಿ ಶಂಕರಮಠದ ಏಕಾದಶ ವಾರ್ಷಿಕೋತ್ಸವ ಮತ್ತು ವಿಜಯಯಾತ್ರೆ ಅಂಗವಾಗಿ ಮಾ.13ರಂದು ನಗರಕ್ಕೆ ಆಗಮಿಸುತ್ತಿರುವ ಶೃಂಗೇರಿ ಜಗದ್ಗುರು ವಿಧುಶೇಖರಭಾರತಿ ಸ್ವಾಮೀಜಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಎಂದು ಮಠದ ಅಧ್ಯಕ್ಷ ಮಹೇಶ ದೇಶಪಾಂಡೆ ತಿಳಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಮಾ.7ರಿಂದ ವಿಜಯಯಾತ್ರೆ ಆರಂಭವಾಗಿದೆ. ಮಾ.13ರಂದು ಸಂಜೆ 5.30ಕ್ಕೆ ವಿಧುಶೇಖರಭಾರತಿ ಸ್ವಾಮೀಜಿಗಳು ನಗರ ಬರಲಿದ್ದಾರೆ. ರಜತಗಿರಿ ಹನುಮಾನ ಮಂದಿರದಿಂದ ಶಂಕರಮಠದವರೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಭ್ಯವ ಶೋಭಾಯಾತ್ರೆ ಜರುಗಲಿದೆ ಎಂದು ಭಾನುವಾರ ವಜ್ರಹನುಮಾನ ನಗರದಲ್ಲಿರುವ ಶಂಕರಮಠದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಂದು ಸಂಜೆ 7ಕ್ಕೆ ಜಗದ್ಗುರುಗಳ ಪಾದಪೂಜೆ, ಗೌರವ ಸಮರ್ಪಣೆ ನಡೆಯಲಿದೆ. ಇದೇ ವೇಳೆ, ಶ್ರೀಗಳಿಂದ ಆಶೀರ್ವಚನ, ಶಾರದಾ ಚಂದ್ರಮೌಳೀಶ್ವರ ಪೂಜೆ ನೆರವೇರಲಿದೆ. ಮಾ.14ರಂದು ಬೆಳಗ್ಗೆ 7.30ಕ್ಕೆ ಮಠದ ಅರ್ಚಕರಿಂದ ಶಾರದಾ ಚಂದ್ರಮೌಳೀಶ್ವರ ಪೂಜೆ, 8.30ಕ್ಕೆ ಸೌರ ಹೋಮ ನಡೆಯಲಿದೆ. ಸಂಜೆ 5.30ಕ್ಕೆ ಸಂಗೀತ ಕಾರ್ಯಕ್ರಮ, ರಾತ್ರಿ 8.30ಕ್ಕೆ ಜಗದ್ಗುರುಗಳಿಂದ ಶಾರದಾ ಚಂದ್ರಮೌಳೀಶ್ವರ ಪೂಜೆ ಜರುಗಲಿದೆ ಎಂದರು.

ಮಾ.15ರಂದು ಬೆಳಗ್ಗೆ 8.30ಕ್ಕೆ ಚಂಡಿಹೋಮ ಪ್ರಾರಂಭವಾಗಲಿದೆ. ಜಗದ್ಗುರುಗಳಿಂದ ಶಾರದಾ ಚಂದ್ರಮೌಳೀಶ್ವರ ಗುರು ಮೂರ್ತಿಗಳಿಗೆ ಮಹಾಭಿಷೇಕ, ಚತುರ್ವೇದ ಹಾಗೂ ಸುಂದರಕಾಂಡ ಪಾರಾಯಣಗಳು, ಗುರುಚರಿತ್ರೆ ಸಪ್ತಾಯ ಪಾರಾಯಣಗಳು, ಚಂಡಿ ಹೋಮದ ಪೂರ್ಣಾಹುತಿ, ದತ್ತಪಾದುಕಾ ಪ್ರತಿಷ್ಠಾಪನೆ ನೆರವೇರಲಿದೆ. ಇದೇ ವೇಳೆ, ಸುವರ್ಣ ಭಾರತಿ ಭವನದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಮಠದ ಉಪಾಧ್ಯಕ್ಷ ಶ್ಯಾಮಭಟ್ ಜೋಶಿ, ಕಿರಣ ಇನಾಮದಾರ, ಅಶೋಕ ಕಾರಜೋಳ, ಹರೀಶ ಜೋಶಿ, ಹನುಮಂತ ಬಟಜಿ, ಕೇಶವ ನೀಲಕಂಠ ದೇಶಪಾಂಡೆ, ಪವನ ಜೋಶಿ, ವಿಜಯ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net