

ಹಿರೇಕೆರೂರ: ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಜ. 10, 11ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಸಿದ್ಧತೆ ನಡೆದಿದೆ. ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎನ್. ಸುರೇಶಕುಮಾರ ಹೇಳಿದರು.
ಪಟ್ಟಣದ ಕಸಾಪ ಕಾರ್ಯಾಲಯದಲ್ಲಿ ಬುಧವಾರ ಸಮ್ಮೇಳನದ ಪೂರ್ವ ಸಿದ್ಧತೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಜ. 10ರಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ರಾಷ್ಟ್ರ, ಜಿಲ್ಲಾ ಕಸಾಪ ಅಧ್ಯಕ್ಷ ಪರಿಷತ್ ಧ್ವಜ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಎನ್.ಸುರೇಶಕುಮಾರ ನಾಡ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 7 ಗಂಟೆಗೆ ಜಿ.ಬಿ. ಶಂಕರರಾವ್ ವೃತದಿಂದ ವೇದಿಕೆಯವರೆಗೆ ಸಮ್ಮೇಳನದ ಮೆರವಣಿಗೆ ನಡೆಯಲಿದೆ ಎಂದರು.
ಸಮ್ಮೇಳನದ ಯಶಸ್ಸಿಗೆ ಕಸಾಪ ಪದಾಧಿಕಾರಿಗಳು, ಸಾಹಿತಿಗಳು, ತಾಲೂಕಿನ ಶಿಕ್ಷಕರು, ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು, ಸಾರ್ವಜನಿಕರು ಸಹಾಯ-ಸಹಕಾರ ನೀಡುವ ಜತೆಗೆ ಹಗಲಿರುಳು ದುಡಿಯುತ್ತಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 20 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದ್ದು, ಆಸನದ ಜತೆಗೆ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ನಿಗದಿಪಡಿಸಲಾಗಿದೆ. ಎಲ್ಲರಿಗೂ ಸಿಇಎಸ್ ವಿದ್ಯಾಸಂಸ್ಥೆಯ ವತಿಯಿಂದ ಸಂಸ್ಥೆಯ ಆವರಣದಲ್ಲಿ ಊಟ, ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜ್ಗಳ ವತಿಯಿಂದ ಡ್ಯಾನ್ಸ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದ ರಂಗನ್ನು ಹೆಚ್ಚಿಸಬೇಕು ಎಂದರು.
ತಾಲೂಕು ಕಸಾಪ ಗೌರವ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ಕಾರ್ಯದರ್ಶಿಗಳಾದ ಪಿ.ಎಸ್. ಸಾಲಿ, ಎಂ.ಎಂ. ಮತ್ತೂರ, ಪದಾಧಿಕಾರಿಗಳಾದ ಬಿ.ಎಸ್. ಪಾಟೀಲ, ಎನ್.ಎಸ್. ಚಿಕ್ಕನರಗುಂದಮಠ, ಕುಮಾರ ಮಡಿವಾಳರ, ಜೆ.ಬಿ. ಮರಿಗೌಡರ, ಬಿ.ವಿ. ಸೊರಟೂರ, ಕುಮಾರ ನಾಯ್ಕರ್, ರಾಮಣ್ಣ ತೆಂಬದ, ಬಿ.ಐ. ಗಂಗಪ್ಪಳವರ, ಮನೋಜ ಪಾಟೀಲ, ಕೆ.ಎಚ್. ಕಾಟೇನಹಳ್ಳಿ ಇದ್ದರು.