ಬರಪೀಡಿತ ತಾಲೂಕು ಎಂದು ಘೋಷಿಸಲು ಎಲ್ಲ ತಯಾರಿ

HKR-bara
Published on

ಹಿರೇಕೆರೂರ: ರಟ್ಟಿಹಳ್ಳಿ, ಹಿರೇಕೆರೂರ ತಾಲೂಕನ್ನು ಈಗಾಗಲೇ ಬರಪೀಡಿತ ತಾಲೂಕು ಎಂದು ಘೋಷಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.

ಹಿರೇಕೆರೂರ ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 28259 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಇದರಲ್ಲಿ 16050 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 27434 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದ್ದು, ಇದರಲ್ಲಿ 15715 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ ಎಂದು ಸರ್ಕಾರಕ್ಕೆ ಈಗಾಗಲೇ ವರದಿ ಕಳುಹಿಸಲಾಗಿದೆ.

ಮೊದಲನೆ ಹಂತದಲ್ಲಿ ಹಿರೇಕೆರೂರ, ರಟ್ಟಿಹಳ್ಳಿ ಹಾಗೂ ಸವಣೂರ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಸರ್ಕಾರ ಪರಿಗಣಿಸಿದ್ದು, ಸರ್ವೇ ಮಾಡಲು ಸೂಚನೆ ನೀಡಿದ್ದರು. ಅದರಂತೆ ಕೃಷಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ತಂಡ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 10 ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ನಡೆಸಿ, ಇದರ ಸಮಗ್ರ ವರದಿಯನ್ನು ಸರ್ಕಾರಕ್ಕೆ ಈಗಾಗಲೇ ಕಳುಹಿಸಿದೆ. ಇನ್ನು ಮಧ್ಯಂತರ ಬೆಳೆ ವಿಮೆ ಬಿಡುಗಡೆಗಾಗಿ ಹಾಗೂ ಬರಗಾಲದ ಬೆಳೆ ಪರಿಹಾರಕ್ಕಾಗಿ, ಈಗಾಗಲೇ ಕೃಷಿ ಅಧಿಕಾರಿಗಳ ತಂಡ ಹಾಳಾದ ಜಮೀನುಗಳಿಗೆ ತೆರಳಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಹಾಗೂ ಆಯಾ ವಿಮೆ ಕಂಪನಿಗಳಿಗೆ ವರದಿ ಸಲ್ಲಿಸಲಾಗಿದೆ.

ಮೊದಲ ಹಂತದಲ್ಲಿ ರಟ್ಟಿಹಳ್ಳಿ, ಹಿರೇಕೆರೂರ ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಲು ಬೇಕಾದ ಅಗತ್ಯ ಸಮೀಕ್ಷಾ ವರದಿ ಸಲ್ಲಿಸಲು ಸೂಚನೆ ನೀಡಿತ್ತು. ಅದರಂತೆ ಸಮೀಕ್ಷೆ ವರದಿ, ದಾಖಲಾತಿಗಳನ್ನು ಈಗಾಗಲೇ ಸರ್ಕಾರಕ್ಕೆ ಹಾಗೂ ಮಧ್ಯಂತರ ಬೆಳೆ ವಿಮೆ ಬಿಡುಗಡೆಗಾಗಿ ವಿಮಾ ಕಂಪನಿಗಳಿಗೆ ವರದಿ ಸಲ್ಲಿಸಲಾಗಿದೆ.I ಡಾ.ಎಂ.ವಿ. ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net