ನಾಳೆ ನಡೆಯುವ ಕೆಎಎಸ್ ಪರೀಕ್ಷೆಗೆ ಸಕಲ ಸಿದ್ಧತೆ

All preparations for tomorrow's KAS exam
ಟಿ. ಭೂಬಾಲನ್, ಜಿಲ್ಲಾಧಿಕಾರಿ
Published on

ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚಿಸಿರುವ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಆ.27ರಂದು ಜಿಲ್ಲೆಯ 8 ಕೇಂದ್ರಗಳಲ್ಲಿ ನಡೆಯುವ ಪೂರ್ವಭಾವಿ ಪರೀಕ್ಷೆಗೆ ಜಿಲ್ಲಾಡಳಿತ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.

ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳಿಗೆ ಎರಡು ಬಾರಿ ತರಬೇತಿ ನೀಡಲಾಗಿದೆ. ಪರೀಕ್ಷಾ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಪಡೆದು ಜಿಲ್ಲಾ ಖಜಾನೆಯಲ್ಲಿ ಠೇವಣಿ ಇರಿಸಲು ಹಾಗೂ ಪರೀಕ್ಷಾ ದಿನ ನಿಗದಿತ ಸಮಯದೊಳಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ವಿತರಣಾ ತಂಡದವರಿಗೆ ಹಸ್ತಾಂತರಿಸಲು ತ್ರಿಸದಸ್ಯರ ಸಮಿತಿ ನೇಮಕ ಮಾಡಲಾಗಿದೆ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರೆಂದು ನೇಮಕ ಮಾಡಿ ಆದೇಶಿಸಲಾಗಿದೆ. ಅವರು ಪರೀಕ್ಷೆ ಪ್ರಾರಂಭಕ್ಕಿಂತ ಒಂದು ಗಂಟೆ ಮುಂಚಿತ ಕೇಂದ್ರದಲ್ಲಿ ಹಾಜರಿದ್ದು, ಲಾಗಿನ್ ಮೂಲಕ ಕೇಂದ್ರದ ಅಗತ್ಯ ಮಾಹಿತಿ ಒದಗಿಸಬೇಕು. ಪರೀಕ್ಷಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಡಿಸಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.

8 ಕೇಂದ್ರಗಳಲ್ಲಿನ ಗೌಪ್ಯ ಸಾಮಗ್ರಿಗಳನ್ನು ಅಂಚೆ ಮೂಲಕ ರವಾನಿಸುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನ ಸಂಜೆ 6 ರವರೆಗೆ ಅಂಚೆ ಕಚೇರಿ ತೆರೆಯಲು ಹಾಗೂ ಗೌಪ್ಯ ಸಾಮಗ್ರಿ ಸ್ವೀಕರಿಸಲು ಅಂಚೆ ಅಧೀಕ್ಷಕರಿಗೆ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಗೌಪ್ಯ ಸಾಮಗ್ರಿಗಳನ್ನು ಪೂರೈಸಲು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ದಿನ ಬೆಳಗ್ಗೆ 7 ಕ್ಕೆ ಜಿಲ್ಲಾ ಖಜಾನೆಯಿಂದ ಗೌಪ್ಯ ಸಾಮಗ್ರಿಗಳನ್ನು ಪಡೆದುಕೊಂಡು ಸರ್ಕಾರಿ ವಾಹನದಲ್ಲಿ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ಒಪ್ಪಿಸಿ, ಸ್ವೀಕೃತಿ ಪಡೆದು ವರದಿ ನೀಡಲು ಸೂಚಿಸಲಾಗಿದೆ. ಪರೀಕ್ಷೆಯನ್ನು ಸೂಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸ್ಥಳೀಯ ಜಾಗೃತ ದಳವನ್ನು ರಚಿಸಲಾಗಿದೆ. ಒಂದು ದಿನ ಮುಂಚೆಯೇ ನಿಯೋಜಿಸಿದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿ ವರದಿ ನೀಡುವುದು ಹಾಗೂ ಪರೀಕ್ಷಾ ದಿನದಂದು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್, ಮೊಬೈಲ್ ಪೊಲೀಸ್ ಸ್ಕ್ವಾಡ್, ಹೆಚ್ಚುವರಿ ವಿಚಕ್ಷಣಾ ದಳ ನಿಯೋಜಿಸಲಾಗಿದೆ. ಪರೀಕ್ಷಾ ದಿನ ಪ್ರಶ್ನೆ ಪತ್ರಿಕೆ ವಿತರಣಾ ತಂಡದ ಬೆಂಗಾವಲಿಗೆ ಸಶಸ್ತ್ರ ಪೊಲೀಸರನ್ನು ನಿಯೋಜಿಸಿ ಅಗತ್ಯ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸಿಸಿಟಿವಿ ಅಳವಡಿಸಿ ಕಣ್ಗಾವಲಿರಿಸಲಾಗಿದ್ದು, ಎಲ್ಲ ಕೇಂದ್ರಗಳ ಕೊಠಡಿಗಳಿಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ

ಪರೀಕ್ಷಾ ದಿನದಂದು ವಿಜಯಪುರ ನಗರದ 8 ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ಬೆಳಗ್ಗೆ 8.30 ರಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನಾಗರಿಕ ಸುರಕ್ಷಾ ಸಂಹಿತೆ-2023 ಕಲಂ 163ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಇತರರು ಮೊಬೈಲ್ ಫೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಪರೀಕ್ಷಾ ಕೇಂದ್ರಗಳ ಸಮೀಪದ ಜೆರಾಕ್ಸೃ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರ್‌ನೆಟ್, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳನ್ನು ಪರೀಕ್ಷೆ ಅವಧಿಯಲ್ಲಿ ತೆರೆಯದಂತೆ ಆದೇಶಿಸಲಾಗಿದೆ ಎಂದು ಡಿಸಿ ಟಿ. ಭೂಬಾಲನ್ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net