ಮಾರಮ್ಮ ಜಾತ್ರೆಗೆ ಸಕಲ ಸಿದ್ಧತೆ

CLK JAATRE 17
Published on

ಚಳ್ಳಕೆರೆ: ಗೌರಸಮುದ್ರ ಗ್ರಾಮದಲ್ಲಿ ಸೆ.19ರ ಮಂಗಳವಾರ ನಡೆಯಲಿರುವ ಮಾರಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ ಕೈಗೊಳ್ಳಬೇಕು. ಮೂಲ ಸೌಕರ್ಯ, ಭದ್ರತಾ ವ್ಯವಸ್ಥೆಯಲ್ಲಿ ಲೋಪ ಆಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಉಪವಿಭಾಗ ಅಧಿಕಾರಿ ಕಾರ್ತಿಕ್ ಸೂಚಿಸಿದರು.

ಗೌರಸಮುದ್ರ ಗ್ರಾಮದ ತುಮಲಿನ ಜಾತ್ರಾ ಮಹೋತ್ಸವದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಮೂಲ ಸೌಕರ್ಯಗಳ ವ್ಯವಸ್ಥೆ ಪರಿಶೀಲನೆ ನಡೆಸಿ ಮಾತನಾಡಿದರು.

ನಿರೀಕ್ಷೆ ಮೀರಿ ಭಕ್ತರು ಸೇರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳ ವ್ಯವಸ್ಥೆ ಇರಬೇಕು. ಜಿಲ್ಲಾಡಳಿತ ನಿರ್ದೇಶನದಂತೆ ಜಾತ್ರೆಯಲ್ಲಿ ಯಾವುದೇ ಮೂಢನಂಬಿಕೆಗಳ ಆಚರಣೆ ಮತ್ತು ಭಕ್ತರಿಗೆ ತೊಂದರೆ ಆಗದ ರೀತಿ ಸ್ಥಳೀಯ ಆಡಳಿತ ಕ್ರಮ ವಹಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಓಬಣ್ಣ ಮಾತನಾಡಿ, ಶಾಸಕ ಟಿ.ರಘುಮೂರ್ತಿ ಅವರ ನೆರವಿನಿಂದ ಈಗಾಗಲೇ ಜಾತ್ರಾ ಸ್ಥಳದಲ್ಲಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಸೇರಿ 4 ಭಾಗದ ರಸ್ತೆ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.

ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ಮಾತನಾಡಿ, ಜಾತ್ರಾ ಸ್ಥಳಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, 7 ಕಡೆ ಸಹಾಯವಾಣಿ, ಸಿಸಿ ಕ್ಯಾಮರಾ, 4 ರಸ್ತೆ ಭಾಗದಲ್ಲೂ ಸಂಚಾರ ಸುಗಮಕ್ಕೆ ಅನುಕೂಲ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗಾಗಿ 4 ಜನ ಪೊಲೀಸ್ ಉಪಅಧೀಕ್ಷಕರು, 10 ಇನ್ಸ್‌ಪೆಕ್ಟರ್, 40 ಪಿಎಸ್‌ಐ, 2 ಕೆಎಸ್‌ಆರ್‌ಪಿ ತುಕಡಿ, 5 ಡಿಆರ್, 400 ಪೊಲೀಸ್ ಸಿಬ್ಬಂದಿ ಸೇರಿ 200 ಹೋಂ ಗಾರ್ಡ್ಸ್‌ಗಳು ಭದ್ರತೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ರೇಹಾನ್ ಪಾಷಾ, ಕಂದಾಯ ನಿರೀಕ್ಷಕ ಲಿಂಗೇಗೌಡ, ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯರಾದ ಜಿ.ಎಂ.ವೀರಣ್ಣ, ಶಶಿ, ಸಂಜಯ್‌ಗೌಡ, ಸುಭಾಷಿಣಿ, ಗುರುಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net