ಲೋಕಸಭೆ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ

Dc meet
Published on

ರಾಯಚೂರು: ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜು ಮತ್ತು ಎಲ್‌ವಿಡಿ ಕಾಲೇಜಿನಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಎಣಿಕೆ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಸಂಜೆ ಮಾತನಾಡಿ, ಜೂ.4ರಂದು ಬೆಳಗ್ಗೆ 7ಕ್ಕೆ ಮತ ಎಣಿಕೆ ಆರಂಭವಾಗುತ್ತಿದ್ದು, ಎಂಟು ಕೊಠಡಿಗಳ್ಲಲಿ ತಲಾ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳ ಅನುಗುಣವಾಗಿ 18 ರಿಂದ ಗರಿಷ್ಠ 23 ಸುತ್ತುಗಳ್ಲಲಿ ಮತ ಏಣಿಕಯಾಗಲಿದೆ.
ಎಲ್‌ವಿಡಿ ಕಾಲೇಜಿನಲ್ಲಿ ಸುರಪುರ, ಶಹಾಪುರ, ಯಾದಗಿರಿ, ದೇವದುರ್ಗ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಹಾಗೂ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ, ಲಿಂಗಸುಗೂರು ಕ್ಷೇತ್ರಗಳ ಎಣಿಕೆ ಕಾರ್ಯ ನಡೆಯಲಿದೆ.
ಅಂಚೆ ಮತ್ತು ಆನ್‌ಲೈನ್ ಮೂಲಕ ಚಲಾವಣೆಯಾದ ಮತಗಳ ಎಣಿಕೆ ಕಾರ್ಯ ಬೆಳಗ್ಗೆ 8ಕ್ಕೆ ಪ್ರತ್ಯೇಕವಾಗಿ ನಡೆಸಲಾಗುತ್ತಿದ್ದು, ಮತ ಎಣಿಕೆಗಾಗಿ 195 ಮೇಲ್ವಿಚಾರಕರು, 198 ಮೈಕ್ರೋ ಅಬ್ಸರ್ವರ್ಸ್‌, 159 ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಅಭ್ಯರ್ಥಿಯ ತಲಾ ಒಬ್ಬ ಏಜೆಂಟ್‌ಗೆ ಅವಕಾಶ ನೀಡಲಾಗುತ್ತಿದೆ ಎಂದು ಚಂದ್ರಶೇಖರ ನಾಯಕ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ ಮಾತನಾಡಿ, ಮತ ಎಣಿಕೆ ಕೇಂದ್ರದಲ್ಲಿ ಇಬ್ಬರು ಹೆಚ್ಚುವರಿ ಎಸ್ಪಿ, ನಾಲ್ವರು ಡಿವೈಎಸ್ಪಿ, 17 ಸಿಪಿಐ, 44 ಪಿಎಸ್‌ಐ, 111 ಎಎಸ್‌ಐ, 388 ಪೇದೆಗಳು, 220 ಗೃಹ ರಕ್ಷಕ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿ, 10 ಡಿಎಆರ್ ತುಕಡಿ, ಒಂದು ಸಿಆರ್‌ಪಿಎ್ ತುಕಡಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net