ಮತ ಎಣಿಕೆಗೆ ಸಕಲ ಸಿದ್ಧತೆ

2 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭಾ ಚುನಾವಣೆ ಮತ ಎಣಿಕೆ ಜೂ. 4ರಂದು ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14ರಂತೆ ಒಟ್ಟು 112 ಟೇಬಲ್​ ಹಾಗೂ 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಆದೇಶದಂತೆ ಮೊಬೈಲ್​, ಸ್ಮಾರ್ಟ್​ ವಾಚ್​, ಇಲೆಕ್ಟ್ರಾನಿಕ್​ ಉಪಕರಣ ತರಲು ಅವಕಾಶವಿಲ್ಲ. ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರದಲ್ಲಿ ಮತ್ತು ಸುತ್ತಲೂ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಬೆಳಗ್ಗೆ 6.30ಕ್ಕೆ ಅಭ್ಯಥಿರ್ಗಳು ಮತ್ತು ಚುನಾವಣಾ ಏಜೆಂಟರ್​ ಉಪಸ್ಥಿತಿಯಲ್ಲಿ ತೆರಲಾಗುವುದು. ಅಂಚೆ ಮತಪತ್ರಗಳ ಹಾಗೂ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಬೆಳಗ್ಗೆ 8ರಿಂದ ಆರಂಭವಾಗಲಿದೆ. ಮತ ಎಣಿಕೆ ಕಾರ್ಯಕ್ಕೆ ಹೆಚ್ಚುವರಿಯಾಗಿ 6 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಿಸಿದ್ದು, 6 ಟೇಬಲ್​ಗಳಲ್ಲಿ ಅಂಚೆಮತ ಪತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಮತ ಎಣಿಕೆ ಕಾರ್ಯಕ್ಕೆ ಎಣಿಕೆ ಮೇಲ್ವಿಚಾರಕರು, ಸಹಾಯಕರು ಸೇರಿ ಒಟ್ಟು 1500 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. 697 ಜನ ಅಭ್ಯಥಿರ್ಗಳ ಪರ ಏಣಿಕಾ ಏಜಂಟರು ಆಗಮಿಸಲಿದ್ದಾರೆ. ಜೂ. 3ರ ಸಂಜೆ 6 ಗಂಟೆಯಿಂದ ಜೂ.5ರ ರಾತ್ರಿ 10ರವರೆಗೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಆರ್​ಪಿಸಿ 1973 ಕಲಂ 144ರಡಿ ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ ಎಂದರು.
ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ ಮಾತನಾಡಿ, ಮತ ಎಣಿಕೆ ಕಾರ್ಯಕ್ಕೆ ಸಿಆರ್​ಪಿಎಫ್​, ಕೆಎಸ್​ಆರ್​ಪಿ, ಸಿಎಆರ್​, ಹೋಂ ಗಾರ್ಡ್​ ಮತ್ತು ಸ್ಥಳಿಯ ಪೊಲೀಸ್​ ಅಧಿಕಾರಿ, ಸಿಬ್ಬಂದಿ ನಿಯೋಜಿಸಿದ್ದು, ಎಣಿಕೆ ಕೇಂದ್ರದ ಸುತ್ತ ಭದ್ರತೆಗಾಗಿ 650 ಪೊಲೀಸ್​ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಪೆಪ್ಸಿ ಕಂಪನಿ ಕ್ರಾಸ್​ನಿಂದ ಡೇರಿ, ಕೃಷಿ ವಿಶ್ವ ವಿದ್ಯಾಲಯ, ಕೆಇಬಿ ಗ್ರಿಡ್​ ಗೇಟ್​ ಮೂಲಕ ಕಾರಂಜಿ ವೃತ್ತ ಬಳಿಯ ಖಾಲಿ ಜಾಗದಲ್ಲಿ ಅಭ್ಯಥಿರ್ಗಳು ಮತ್ತು ಏಜೆಂಟರ ವಾಹನಗಳಿಗೆ ಪಾಕಿರ್ಂಗ್​ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ, ನವಲಗುಂದ, ಸವದತ್ತಿ, ಕಲಘಟಗಿ ಕಡೆಯಿಂದ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ವಾಹನಗಳನ್ನು ಪೆಪ್ಸಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಶಿರಡಿನಗರ ಮಾರ್ಗವಾಗಿ ಬಸವನಗರ ಹತ್ತಿರದ ಖಾಲಿ ಜಾಗದಲ್ಲಿ ಪಾಕಿರ್ಂಗ್​ ಮಾಡಬೇಕು. ಬೆಳಗಾವಿ ಕಡೆಯಿಂದ ಬರುವವರು ಬಸವನಗರ ಬಳಿಯ ಎಡಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಪಾಕಿರ್ಂಗ್​ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 144 ಕಲಂ ಜಾರಿಯಲ್ಲಿರುವುದರಿಂದ ವಿಜಯೋತ್ಸವ, ಪಟಾಕಿ ಹಚ್ಚುವುದನ್ನು ನಿರ್ಬಂಧಿಸಲಾಗಿದೆ. ಮಹಾನಗರ ಸೇರಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸುಮಾರು 2500 ಪೊಲೀಸ್​ ಅಧಿಕಾರಿ, ಸಿಬ್ಬಂದಿ ಹಾಗೂ 6 ಕೆಎಸ್​ಆರ್​ಪಿ ತುಕುಡಿ ಹಾಗೂ 500 ಹೋಂ ಗಾರ್ಡ್​ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.
ಉಪ ಪೊಲೀಸ್​ ಆಯುಕ್ತ ಕುಶಲ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net