ಕಸ್ತೂರಿ ರಂಗನ್ ವರದಿ ವಿರುದ್ಧ ಪಕ್ಷಾತೀತ ಪ್ರತಿಭಟನೆ

Strike
Published on

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮವಲಯ ಘೋಷಣೆಯಾಗುವ ಆತಂಕ ಕಾಡುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಜನರು ತೀವ್ರ ಆಕ್ರೋಶಗೊಂಡು ಸಿಡಿದೆದ್ದಿದ್ದು ನಗರದಲ್ಲಿ ಮಂಗಳವಾರ ಪಕ್ಷಾತೀತ ಬೃಹತ್ ಪ್ರತಿಭಟನೆ ನಡೆಯಿತು.

ಬೆಳಗ್ಗೆ 11.30ರ ಸುಮಾರಿಗೆ ನಗರದ ತಾಲೂಕು ಕಚೇರಿ ಆವರಣದಿಂದ ವಿವಿಧ ಘೋಷಣಾ ಫಲಕಗಳ ಸಹಿತ ಮುಖ್ಯಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಆಜಾದ್ ಪಾರ್ಕ್ ವೃತ್ತಕ್ಕೆ ಆಗಮಿಸಿದರು. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಹಾಗೂ ಕರ್ನಾಟಕ ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಜತೆಗೆ ಸರ್ವ ರಾಜಕೀಯ ಪಕ್ಷಗಳು ಒಗ್ಗೂಡಿದ್ದು ವಿಶೇಷ.

ಸುಪ್ರೀಂ ಕೋರ್ಟ್ ಗೆ ವಿವರಣೆ ನೀಡಲಿ

ಅನಂತರ ಬಹಿರಂಗ ಸಭೆಯಲ್ಲಿ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಮಲೆನಾಡು ಭಾಗದಲ್ಲಿ ಜನವಸತಿ ಇದ್ದು ಜನರ ಬದುಕು ಇರುವುದರಿಂದ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಮ್ಮ ಸರ್ಕಾರಗಳು ಜವಾಬ್ದಾರಿಯುತವಾಗಿ ಸುಪ್ರೀಂ ಕೋರ್ಟ್‍ಗೆ ವಿವರಣೆ ನೀಡಬೇಕಿದೆ ಎಂದು ಹೇಳಿದರು.

ಮಲೆನಾಡು ಭಾಗದ ಶಾಸಕರು ವರದಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಬೇಕಿದೆ. ಚಳವಳಿಗಳನ್ನು ಒಗ್ಗೂಡಿಸುವ ಅಗತ್ಯವಿದೆ. ಪ್ರಸ್ತುತ ನಡೆಸುತ್ತಿರುವ ಈ ಹೋರಾಟದಲ್ಲಿ ಬದ್ಧತೆ ತುಂಬದಿದ್ದಲ್ಲಿ ಈ ಮಲೆನಾಡು ಜಿಲ್ಲೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ವರದಿ ಜಾರಿ ವಿಚಾರದಲ್ಲಿ ಕೇರಳ ಮಾದರಿ ನಮಗೆ ಮುಖ್ಯವಾಗಬೇಕು. ಜನವಸತಿ ಪ್ರದೇಶವನ್ನು ವರದಿಯಿಂದ ಕೈಬಿಡಬೇಕಿದೆ. ನ್ಯಾಯಾಲಯಗಳ ಕೆಲವು ತೀರ್ಪುಗಳು ಚರ್ಚೆ ಮತ್ತು ವಿಮರ್ಶೆಗೆ ಒಳಪಡಬೇಕಿದೆ ಎಂದರು.

ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯ ಕತ್ತಲು

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಈ ಮಾಸಾಂತ್ಯದವರೆಗೆ ಗಡುವು ನೀಡಲಾಗಿದ್ದು, ಇದೀಗ ಎಚ್ಚೆತ್ತುಕೊಳ್ಳದಿದ್ದಲ್ಲಿ ಪೀಳಿಗೆಯ ಭವಿಷ್ಯ ಕತ್ತಲಾಗಲಿದೆ ಎಂದು ಎಚ್ಚರಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ವಿವಿಧ ಪಕ್ಷಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಜಿಲ್ಲೆಯ ಜನರ ಉಳಿವಿಗಾಗಿ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಪ್ರಾಸ್ತಾವಿಕ ಮಾತನಾಡಿ, ಕಸ್ತೂರಿ ರಂಗನ್ ವರದಿ ಇಡೀ ರಾಜ್ಯಕ್ಕೆ ಬಂದೊದಗಿರುವ ಮಾರಕ ಯೋಜನೆ. ಕಸ್ತೂರಿ ರಂಗನ್ ವರದಿ ತಯಾರಿಸುವ ಕಾಲಕ್ಕೆ ಯಾವುದೇ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿಲ್ಲ. ಇದೀಗ ವರದಿ ಜಾರಿಯ ತೂಗುಗತ್ತಿ ತಲೆಯ ಮೇಲಿದ್ದು, ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಎಂದರು.

ಸಿಪಿಐ ಮುಖಂಡ ಎಚ್.ಎಂ.ರೇಣುಕಾರಾಧ್ಯ, ಬಿಎಸ್‍ಪಿ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮತ್ತಿತರರು ಮಾತನಾಡಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಮೋಹನ್‍ಕುಮಾರ್, ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಬಾಲಕೃಷ್ಣ ಬಾಳೂರು, ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ಖಾಂಡ್ಯ ನಾಗರಿಕ ಹಿತರಕ್ಷಣಾ ಸಮಿತಿ, ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ರೈತಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಕನ್ನಡಸೇನೆ, ರೈತಸಂಘ, ಕಾರ್ಮಿಕರ ಸಂಘ, ದಲಿತಪರ ಮತ್ತಿತರ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net