

ಅಭಿವೃದ್ಧಿ ಕಡೆಗಣಿಸಿದ ಶಾಸಕರು : ಗ್ಯಾರಂಟಿಗಳಾಚೆಯೂ ಬದುಕು ಇದೆ ಎನ್ನುತ್ತಿರುವ ಜನ
ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳು ಕಳೆದಿದ್ದರೂ ಗ್ಯಾರಂಟಿ ಬೇಡಿಕೆ ಈಡೇರಿಕೆಗೆ ನೀಡಿದಷ್ಟು ಇಚ್ಛಾಶಕ್ತಿ, ಇತರ ಮೂಲಸೌಲಭ್ಯ ಒದಗಿಸಲು ನೀಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿಗಳಾಚೆಯೂ ಬದುಕು ಇದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮೂರು ವರ್ಷಗಳಿಂದ ಜಿಲ್ಲೆಯ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ನೂತನ ಸರ್ಕಾರ ಇದಕ್ಕೆ ಸ್ಪಂದಿಸುತ್ತದೆ ಎಂದು ನಿರೀೆ ಹೊಂದಿದ್ದ ಜಿಲ್ಲೆಯ ಜನತೆಗೆ ಇದೀಗ ಭರವಸೆ ಇಲ್ಲದಂತಾಗಿದೆ. ಒಂದೇ ಮಳೆಗೆ ಕೋಲಾರ ನಗರ ಸೇರಿದಂತೆ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಹೋಗುವ ಪ್ರಮುಖ ರಸ್ತೆಗಳು ಕೆಸರು ಗದ್ದೆಯಾಗಿದ್ದರೂ ಈವರೆಗೆ ಶಾಶ್ವತ ಪರಿಹಾರದ ಮಾತು ನೂತನ ಶಾಸಕರಿಂದ ಕೇಳಿಬಂದಿಲ್ಲ.
ಘೋಷಣೆಯಾಗಿಲ್ಲ ಅನುದಾನ: ಮುಂಗಾರು ಅಬ್ಬರಿಸುತ್ತಿದ್ದು ರಸ್ತೆಗಳು ಹಳ್ಳಗಳಾಗಿವೆ. ಇವುಗಳ ದುರಸ್ತಿಗೆ ರಾಜ್ಯ ಸರ್ಕಾರದಿಂದ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಕಳೆದ ಬಿಜೆಪಿ ಸರ್ಕಾರದಲ್ಲಿ ಬಿಡುಗಡೆಗೊಂಡಿದ್ದ ಅನುದಾನದಲ್ಲಿ ಕಾಮಗಾರಿ ಮುಂದುವರಿಸಲಾಗುತ್ತಿದೆ.
ಅನುಷ್ಠಾನಕ್ಕೆ ಮುಂದಾಗದ ಶಾಸಕ: ನಗರದಲ್ಲಿ ರಸ್ತೆಗಳು ಹಿಂದಿನ ಸರ್ಕಾರದಲ್ಲಿ ಇದ್ದ ರೀತಿಯಲ್ಲಿಯೇ ಇವೆ. ಪ್ರಾರಂಭದಲ್ಲಿ ರಸ್ತೆಗಳ ಅಭಿವೃದ್ಧಿ, ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಬ್ಬರಿಸಿದ್ದು ಬಿಟ್ಟರೆ ಈವರೆಗೂ ಕಾರ್ಯಗತಗೊಳಿಸಲು ಮುಂದಾಗಿಲ್ಲ. ಇನ್ನು ಶಾಸಕರಿಗಿಂತ ನೂತನ ಜಿಲ್ಲಾಧಿಕಾರಿಯೇ ಇಚ್ಛಾಶಕ್ತಿ ವಹಿಸಿ ನಗರದ ರಸ್ತೆ, ಸ್ವಚ್ಛತೆ ಕಡೆ ಗಮನಹರಿಸಿ ಕಾರ್ಯ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಕೋಲಾರ ನಗರದಲ್ಲಿ ಕಸದ ರಾಶಿಗಳು ಸ್ವಚ್ಛಗೊಳ್ಳದ ಚರಂಡಿ, ಹೂಳು ತುಂಬಿರುವ ರಾಜಕಾಲುವೆಗಳ ಸ್ಥಿತಿಗತಿಗಳನ್ನು ಜಿಲ್ಲಾಧಿಕಾರಿಗಳು ವೀಸಿ ಕ್ಲೀನ್ ಸಿಟಿ ಮಾಡಲು ಮುಂದಾಗಿದ್ದಾರೆ, ಆದರೆ ಜನಪ್ರತಿನಿಧಿಗಳಾದ ಶಾಸಕರು, ಸಂಸದರು ಇದಕ್ಕೆ ಸಾಥ್ ನೀಡುತ್ತಿಲ್ಲ, ಅದೇ ರೀತಿ ತಾಲೂಕು ಕೇಂದ್ರಗಳಲ್ಲಿಯು ಸ್ಥಳಿಯ ಶಾಸಕರು ಜಿಲ್ಲಾಧಿಕಾರಿಗಳಿಗೆ ಸರಿಯಾಗಿ ಸಾಥ್ ನೀಡುತ್ತಿಲ್ಲ.
ಕಾಮಗಾರಿ ಅಪೂರ್ಣ: ಕೋಲಾರದಿಂದ ಮಾಲೂರು, ಟೇಕಲ್ ಹಾಗೂ ಬೇತಮಂಗಲಕ್ಕೆ ಹೋಗುವ ರಸ್ತೆ ಕಾಮಗಾರಿಗಳು ಅಪೂರ್ಣಗೊಂಡಿವೆ. ಕೋಲಾರದಿಂದ ಆವಣಿ ಶಾಪುರಕ್ಕೆ ಹೋಗುವ ರಸ್ತೆ ಒಂದೇ ಮಳೆಗೆ ಕೆಸರು ಗದ್ದೆಯಾಗಿದೆ. ಅರೆಬರೆ ಕಾಮಗಾರಿಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಕ್ರಮ ವಹಿಸದಿರುವುದಕ್ಕೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕೋಲಾರದಿಂದ ಶ್ರೀನಿವಾಸಪುರಕ್ಕೆ ಹೋಗುವ ರಸ್ತೆಯಂತೂ ದುಸ್ತರವಾಗಿದ್ದು ಮುದುವಾಡಿ ತನಕ ಜೀವಭಯದಲ್ಲೇ ಪ್ರಯಾಣಿಕರು ಪ್ರಯಾಣಿಸುವಂತಾಗಿದೆ. ಕೋಲಾರದಿಂದ ಮಣಿಟ್ಟಕ್ಕೆ ಹೋಗುವ ರಸ್ತೆ ಗಾಂಧಿನಗರದಿಂದ ಎರಡು ಕಿಮೀವರೆಗೆ ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ, ರಸ್ತೆ, ಚರಂಡಿ ಯಾವುದು ಎಂಬುದು ಕಾಣದಂತಾಗಿದೆ.
ಬಜೆಟ್ ಸಭೆ ನಡೆಯುವ ತನಕ ಕಾಮಗಾರಿಗಳಿಗೆ ಹಿನ್ನಡೆಯಾಗಿತ್ತು.ಈಗಾಗಲೇ ನಡೆದಿರುವ ಕಾಮಗಾರಿಗಳಿಗೆ ಬಜೆಟ್ನಲ್ಲಿ ಹಣ ಬಿಡುಗಡೆಯಾಗಿದೆ. ಅಪೂರ್ಣಗೊಂಡಿರುವ ಕಾಮಗಾರಿಗಳು ಒಂದು ತಿಂಗಳಲ್ಲಿ ಪ್ರಾರಂಭಗೊಳ್ಳುತ್ತವೆೆ. ತಡೆಹಿಡಿಯಲಾಗಿದ್ದ ಕಾಮಗಾರಿ ಮುಂದುವರಿಸಲು ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ರಸ್ತೆಗಳು, ಚರಂಡಿ, ರಾಜಕಾಲುವೆಗಳ ಒತ್ತುವರಿ ತೆರವು ಮತ್ತು ಹೂಳು ತೆಗೆಯುವ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಹೊಸ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿ ನಡೆಸಲಾಗುತ್ತಿದೆ. ನಗರದಲ್ಲಿ ಕ್ರಿಯಾ ಯೋಜನೆ ತಯಾರಾಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. |ಅಕ್ರಂಪಾಷಾ ಜಿಲ್ಲಾಧಿಕಾರಿ, ಕೋಲಾರ.
ಬೂದಿಕೋಟೆ: ಬಂಗಾರಪೇಟೆ&ಕಾಮಸಮುದ್ರ ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮಾರ್ಗದುದ್ದಕ್ಕೂ ದೊಡ್ಡದೊಡ್ಡ ಗುಂಡಿಗಳು ಬಿದ್ದಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆ ನೀರೆಲ್ಲ ರಸ್ತೆ ಮಧ್ಯದ ಗುಂಡಿಗಳ ನಿಲ್ಲುವುದರಿಂದ, ವಾಹನ ಸವಾರರು ರಸ್ತೆ, ಗುಂಡಿ ಯಾವುದೆಂದು ದುರ್ಬೀನು ಹಾಕಿ ಹುಡುಕುವಂತಾಗಿದ್ದು, ಪ್ರಾಣ ಭಯದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕಾಮಸಮುದ್ರವು ಬಂಗಾರಪೇಟೆ ತಾಲೂಕು ಕೇಂದ್ರಕ್ಕೆ ಹೊಂದಿಕೊಂಡಿರುವ ಹೋಬಳಿ ಕೇಂದ್ರವಾಗಿದ್ದು, ತಮಿಳುನಾಡು ಮತ್ತು ಆಂಧ್ರ್ರಕ್ಕೆ ಗ್ರಾಮದ ಮಾರ್ಗವಾಗಿಯೇ ಸಂಚರಿಸಬೇಕಾದರಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಆದರೆ ಮಾರ್ಗ ಹದಗೆಟ್ಟಿದ್ದರಿಂದ ಮಳೆಗಾಲ ಬಂತೆಂದರೆ ರಸ್ತೆಯೆಲ್ಲ ಕೆಸರು ಗದ್ದೆಯಾಗುತ್ತದೆ. ನಡು ರಸ್ತೆಯಲ್ಲಿ ಬಿದ್ದಿರುವ ಮೊಣಕಾಲುದ್ದದ ಗುಂಡಿಗಳಲ್ಲಿ ನೀರು ನಿಂತು ಸುಗಮ ಸಂಚಾರಕ್ಕೆ ಅಡತಡೆಯನ್ನುಂಟು ಮಾಡುತ್ತಿದೆ. ಇದರಿಂದಾಗಿ ದಿನೇ ದಿನೇ ಅಪಘಾತಗಳ ಸಂಖ್ಯೆಯೂ ಹೆಚ್ಚಿವೆ. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಸಂಘ&ಸಂಸ್ಥೆಗಳು ಹಲವು ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಿಲ್ಲ.
ಮಾಗೊಂದಿ ಮಾರ್ಗವಾಗಿ ಸಂಚಾರ: ಬಂಗಾರಪೇಟೆ &ಕಾಮಸಮುದ್ರ ರಸ್ತೆ ಹದಗೆಟ್ಟಿರುವುದರಿಂದ ವಾಹನ ಸವಾರರು ಪ್ರಾಣ ಭಯದಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದನ್ನೇ ಬಿಟ್ಟಿದ್ದು, ಕೆಲವರು ಬಂಗಾರಪೇಟೆ &ಮಾಗೊಂದಿ ಮಾರ್ಗವಾಗಿ, ಇನ್ನು ಕೆಲವರು ಬಂಗಾರಪೇಟೆ&6ನೇ ಮೈಲಿ ಕ್ರಾಸ್ ಮೂಲಕ ಸಂಚರಿಸುತ್ತಾರೆ. ಇದರಿಂದ 5&6 ಕಿ.ಮೀ ಸುತ್ತಿಬಳಸಿ ಕಾಮಸಮುದ್ರಕ್ಕೆ ತೆರಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.
7 ಕಿ.ಮೀ ಮಾತ್ರ ದುರಸ್ತಿ:
ವಿಧಾನಸಭೆ ಚುನಾವಣೆಗೂ ಮುಂಚೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಬಂಗಾರಪೇಟೆ&ಕಾಮಸಮುದ್ರ ಒಟ್ಟು 15 ಕಿ.ಮೀ ಉದ್ದದ ರಸ್ತೆಗೆ 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದಾಗ ಬಂಗಾರಪೇಟೆಯಿಂದ ಪರವನಹಳ್ಳಿ ಗೇಟ್ನವರೆಗೆ ಕೇವಲ 7 ಕಿ.ಮೀ ಡಾಂಬರೀಕರಣ ಮಾಡಿ, ಕೈ ತೊಳೆದುಕೊಂಡಿದ್ದು, ಇನ್ನುಳಿದ 8 ಕಿ.ಮೀ ರಸ್ತೆ ಡಾಂಬರೀಕರಣ ಭಾಗ್ಯವಿಲ್ಲದೆ ಸೊರಗುತ್ತಿದೆ. ಇದರಿಂದ ಪರವನಹಳ್ಳಿ ಗೇಟ್ನಿಂದ ಕಾಮಸಮುದ್ರದವರೆಗೆ ವಾಹನ ಸವಾರರು ಹರಸಾಹಸಪಡುವಂತಾಗಿದೆ.
6 ಕೋಟಿ ರೂ.ವೆಚ್ಚದಲ್ಲಿ ಬಂಗಾರಪೇಟೆ & ಕಾಮಸಮುದ್ರ ಮಾರ್ಗದ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಅರ್ಧ ಕಾಮಗಾರಿ ಮುಗಿದಿದೆ. ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗದ ಕಾರಣ ಅಭಿವೃದ್ಧಿ ಕಾರ್ಯ ಅರ್ಥಕ್ಕೆ ನಿಂತಿದೆ. ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು. |ಎಂ.ರವಿ, ಎಇಇ ಲೋಕೋಪಯೋಗಿ, ಇಲಾಖೆ ಬಂಗಾರಪೇಟೆ
ಬಂಗಾರಪೇಟೆ & ಕಾಮಸಮುದ್ರ ರಸ್ತೆ ಹದಗೆಟ್ಟಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಹತ್ತಾರು ಅಪಘಾತಗಳು ನಡೆದಿವೆ. ಆದಷ್ಟು ಬೇಗ ಸರ್ಕಾರ ಮತ್ತು ಅಧಿಕಾರಿಗಳು ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಿದರೆ ಅನುಕೂಲವಾಗುತ್ತದೆ. | ಸತೀಶ್ ಕಾಮಸಮುದ್ರ