

ವಿಜಯವಾಣಿ ಸುದ್ದಿಜಾಲ ನಂದಗುಡಿ
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಿಕೊಂಡರೆ ಲಾಭ ಗಳಿಸಿ, ರೈತರು ಬದುಕಿನಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದು ಬೆಂಗಳೂರು ಹಾಲು ಒಕ್ಕೂಟದ ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ಡಾ.ಶಿವಾಜಿ ನಾಯಕ್ ಹೇಳಿದರು.
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ನೆಲವಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಸಂಘದ ವ್ಯಾಪಾರ ಲಾಭ 12.4 ಲಕ್ಷ ರೂ.ಗಳಲ್ಲಿ 5.2ಲಕ್ಷ ರೂ.ನಿವ್ವಳ ಲಾಭ ಬಂದಿದೆ, ರೈತರಿಗೆ ಶೇ.2.10 ಬೋನಸ್ ವಿತರಿಸಲಾಗುವುದು. ಉತ್ತಮ ರೀತಿಯಲ್ಲಿ ಸಂಘ ನಡೆದುಕೊಂಡು ಹೋಗುತ್ತಿದೆ. ಉತ್ಪಾದಕರೆಲ್ಲರೂ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಸಂಘವನ್ನು ಪ್ರಗತಿಯ ಪಥದಲ್ಲಿ ಮುನ್ನೆಡೆಸಬೇಕು ಎಂದರು.
ಗುಣಮಟ್ಟದ ಹಾಲನ್ನು ಪಡೆಯಲು ವೈಜ್ಞಾನಿಕ ಪದ್ಧತಿಯಲ್ಲಿ ಮೇವು ಬಳಕೆ, ಸ್ವಚ್ಛತೆಯಿಂದ ಕೆನೆಭರಿತ ಹಾಲು ಉತ್ಪಾದಿಸಿ, ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. 1958ರ ಸಹಕಾರ ಸಂಘಗಳ 28(ಎಬಿ,14) ತಿದ್ದುಪಡಿಯ ಪ್ರಕಾರ ಷೇರುದಾರರು 3 ವರ್ಷ ನಿರಂತವಾಗಿ ಸಂಘಕ್ಕೆ ಯಾವುದೇ ರೀತಿ ವ್ಯವಹಾರ ವಹಿವಾಟು ಇಲ್ಲದಿದ್ದರೆ, ಸದಸ್ಯತ್ವವನ್ನು ಅಮಾನತ್ತಿನಲ್ಲಿಡಲಾಗುವುದು. ಹೊಸಕೋಟೆ ಶಿಬಿರ ವ್ಯಾಪ್ತಿಯಲ್ಲಿ 29,600 ಷೇರುದಾರರಿದ್ದು, ಕೇವಲ 6,307 ಸದಸ್ಯರು ಹಾಲು ಸರಬರಾಜು ಮಾಡುತ್ತಿದ್ದಾರೆ ಎಂದರು.
2023-24ನೇ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಕೆ ಮಾಡಿದ 3 ಮಂದಿ ಹೈನುಗಾರರನ್ನು ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯ ಮಂಜುನಾಥ್, ಮಾಜಿ ಎಪಿಎಂಸಿ ನಿರ್ದೇಶಕ ಚಂದ್ರಮೋಹನ್, ಮಾಜಿ ಅಧ್ಯಕ್ಷ ಜಿ.ಮೂರ್ತಿ, ನಿರ್ದೇಶಕರಾದ ಎನ್.ಸಿ.ಮೂರ್ತಿ, ಎನ್.ವಿ.ಗಿರೀಶ್, ಎನ್.ಎಂ.ಸತೀಶ್, ರಾಕೇಶ್, ಎನ್.ಜಿ.ನಾಗೇಶ್, ನಂಜುಂಡೇಶ್ವರ, ಎಸ್.ಎನ್.ಬೀರೇಶ್, ಭಾರತಿ, ಎಸ್.ಆರ್.ಬೀರೇಶ್ ಕುಮಾರ್, ಮಂಜುಳಾ, ಉಮಾ, ಮುಖ್ಯ ಕಾರ್ಯನಿರ್ವಾಹಕ ಜಯಣ್ಣ, ಹಾಲು ಪರೀಕ್ಷಕ ಎನ್.ಡಿ.ಅನಿಲ್ ಕುಮಾರ್, ಸಹಾಯಕ ಎನ್.ಎಂ.ಚಂದ್ರಪ್ಪ ಮುಖಂಡರಾದ ವಿಜಯೇಂದ್ರ, ರಮೇಶ್ ಇದ್ದರು.