ಎಲ್ಲಾ ಭಾಷೆಗಳನ್ನು ಗೌರವಯುತವಾಗಿ ಕಾಣಬೇಕು: ಡಾ.ಎನ್.ವಿ.ಕರುಣಾಕರ

fmc
Published on

ಮಡಿಕೇರಿ: ಎಲ್ಲಾ ಭಾಷೆಗಳನ್ನು ಗೌರವಯುತವಾಗಿ ಕಾಣುವ ಸ್ವೀಕೃತಿಯ ಮನೋಭಾವ ಪ್ರತಿಯೊಬ್ಬ ರೂಪಿಸಿಕೊಳ್ಳಬೇಕು ಎಂದು ಕಾಲೇಜಿನ ಉಪನ್ಯಾಸಕ ಡಾ.ಎನ್.ವಿ.ಕರುಣಾಕರ ಅಭಿಪ್ರಾಯಪಟ್ಟರು.


ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗ, ಎನ್‌ಎಸ್‌ಎಸ್, ಎನ್‌ಸಿ.ಸಿ, ಇಸಿ/ಸಿಸಿ, ಕ್ರೀಡಾ ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಹೆಸರಾಯಿತು ಕರ್ನಾಟಕ-೫೦ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ಎಂಬ ವಿಷಯದ ಕುರಿತು ಅವರು ಮಾತನಾಡಿದರು.


ಪ್ರಸ್ತುತ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗೂ ಸಾಹಿತ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಭಾಷಿಕ ಎಚ್ಚರವೊಂದು ಒಡಮೂಡಿದೆ. ಆದರೂ ಸಹ ನಮ್ಮ ನಡುವೆ ಪ್ರತ್ಯೇಕತ ಕೂಗು ಮೂಡುತ್ತಲೇ ಇದೆ. ನಾವು ಎಚ್ಚರಿಕೆಯಿಂದ ಭಾಷೆಯನ್ನು ಒಳಗೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಮಾತ್ರವಲ್ಲ ಮಕ್ಕಳು ಕನ್ನಡದ ಜೊತೆಯಲ್ಲಿ ತಮ್ಮ ಮಾತೃ ಭಾಷೆಯಲ್ಲಿ ಕಲಿಕೆಯನ್ನು ಮುಂದುವರೆಸುವ ಅಗತ್ಯವಿದೆ ಎಂದು ಕರುಣಾಕರ ಅಭಿಪ್ರಾಯಪಟ್ಟರು.


ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯ ಪುಸ್ತಕಗಳಲ್ಲಿ ಪ್ರಾದೇಶಿಕ ಭಾಷೆಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಆ ಬಗೆಯಲ್ಲಿ ಕನ್ನಡ ತನ್ನ ಸಹೋದರ ಭಾಷೆಗಳನ್ನು ಒಳಗೊಳ್ಳುವ ಪ್ರಕ್ರಿಯೆಗೆ ನಿರಂತರ ಚಾಲನೆ ನೀಡಬೇಕು. ಆ ಮೂಲಕ ಕನ್ನಡದ ಜತೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳಸುವ ಕೆಲಸ ಆಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಪಿ.ಮಾಥ್ಯೂ, ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕಾಲೇಜಿನ ಐಕ್ಯುಎಸಿ ಸಂಯೋಜಕರಾದ ಡಾ.ರಾಜೇಂದ್ರ ಮಾತನಾಡಿ, ಕರ್ನಾಟಕ ವೈವಿಧ್ಯಮಯ ಭೂ ಪ್ರದೇಶ. ಇಲ್ಲಿ ಹಲವು ಸಂಸ್ಕೃತಿಗಳು ಸಹಜವಾಗಿ ಸೌಹಾರ್ದ ಪರಂಪರೆಯನ್ನು ಹುಟ್ಟುಹಾಕುವ ಪ್ರಯತ್ನ ಮಾಡಿದೆ. ಈ ಸೌಹಾರ್ದ ಪರಂಪರೆಗೆ ಕನ್ನಡ ಭಾಷೆಯೇ ಮೂಲಧಾತುವಾಗಿದೆ. ಕನ್ನಡ ಭಾಷೆಗೆ ಸೌಹಾರ್ದ ಜಾಯಮಾನವೊಂದು ಸಾಹಿತ್ಯ ಪರಂಪರೆಯಿಂದ ದತ್ತವಾಗಿದೆ. ಕನ್ನಡ ಕೇವಲ ಭಾಷೆ ಅಲ್ಲ ಅದೊಂದು ಜೀವನ ವಿಧಾನ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ರಾಘವ, ಕನ್ನಡ ಸಂರಕ್ಷಣೆ ಯುವ ಜನಾಂಗದ ಕರ್ತವ್ಯ. ಯುವ ಜನಾಂಗವನ್ನು ಉತ್ತಮ ಹಾದಿಯಲ್ಲಿ ಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಇತ್ತೀಚಿನ ದಿನಗಳಲ್ಲಿ ಕನ್ನಡ ಬಳಕೆಯಲ್ಲಿ ದೋಷಗಳನ್ನು ಯುವ ಜನತೆ ಹೆಚ್ಚಾಗಿ ಮಾಡುತ್ತಿದೆ. ಕನ್ನಡ ಭಾಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುತ್ತಿದ್ದಾರೆ. ಭಾಷೆಯ ಬಗ್ಗೆ ಯುವ ಜನತೆಯಲ್ಲಿ ಅರಿವಿನ ಕೊರತೆ ಇದೆ. ಅದನ್ನು ಮೀರಬೇಕಾಗಿದೆ. ಕನ್ನಡ ಜಗತ್ತಿನ ಅತ್ಯಂತ ನವಿರಾದ ಭಾಷೆ, ಅಭಿವ್ಯಕ್ತಿಗೆ ಪೂರಕವಾದ ಭಾಷೆ. ಭಾಷೆಯ ಉಳಿವಿಗಾಗಿ ಸರಕಾರಗಳು ನಿಯಮಗಳನ್ನು ರೂಪಿಸುತ್ತದೆ. ಆದರೆ ಅದು ಸಾರ್ವಜನಿಕವಾಗಿ ಅನುಷ್ಠಾನಕ್ಕೆ ಬರುವಾಗ ಅಡೆತಡೆಗಳು ಏರ್ಪಡುತ್ತದೆ. ಈ ಬಗ್ಗೆ ಕಾಳಜಿಯನ್ನು ವಹಿಸಬೇಕಾಗುತ್ತದೆ ಎಂದು ಹೇಳಿದರು.


ವಿಶ್ವದಲ್ಲಿ ಶೇ.೨ ವಿಜ್ಞಾನಿಗಳ ವಿಭಾಗದಲ್ಲಿ ಸ್ಥಾನ ಪಡೆದುಕೊಂಡ ಭಾರತದಲ್ಲಿ ೩ನೇ ಸ್ಥಾನದಲ್ಲಿರುವ ಕಾಲೇಜಿನ ಯುವವಿಜ್ಞಾನಿ ರಸಾಯನ ಶಾಸ್ತ್ರ ವಿಭಾಗದ ಡಾ.ಮಂಜುನಾಥ್, ರಾಜ್ಯಮಟ್ಟದ ಅತ್ಯುತ್ತ ಶಿಕ್ಷಕ ಪ್ರಶಸ್ತಿ ಪಡೆದ ಪ್ರೊ.ನಾಗರಾಜ ಹಾಗೂ ಸುದೀರ್ಘ ಮೂವತ್ತು ವರ್ಷಗಳಿಂದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ.ಎನ್.ವಿ.ಕರುಣಾಕರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಡಾ.ಗಾಯತ್ರಿ, ಇಸಿ/ಸಿಸಿ ಸಂಯೋಜಕಿ ಡಾ.ರೇಣುಶ್ರೀ, ಗಣವಿಜ್ಞಾನ ವಿಭಾಗದ ಪ್ರಾಧ್ಯಾಪಕ ರವಿಶಂಕರ್, ಹಿಂದಿ ವಿಭಾಗದ ಡಾ. ಶ್ರೀಧರ ಹೆಗ್ಡೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net