ನಾಲ್ವಡಿಗೆ ಮರಣೋತ್ತರ ಭಾರತರತ್ನ ನೀಡಲಿ: ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್‌ಗೌಡ ಒತ್ತಾಯ

All Karnataka Kannada Akshara Jatre Mandya
Published on

ಮಂಡ್ಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಪರಿಗಣಿಸಿ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಒತ್ತಾಯಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ವತಿಯಿಂದ ಆಯೋಜಿಸಿದ್ದ 12ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವು ಶಿಕ್ಷಣ, ಸಾಮಾಜಿಕ ನ್ಯಾಯ, ಕೈಗಾರಿಕೆ, ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಧುನಿಕ ಭಾರತಕ್ಕೆ ಮಾದರಿ ಎಂದರು.

ನಾಲ್ವಡಿ ಅವರ ಆಡಳಿತವನ್ನು ಮೈಸೂರಿನ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಅವರು ಮಹಿಳಾ ಶಿಕ್ಷಣ, ದಲಿತರ ಉನ್ನತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಅಭಿವೃದ್ಧಿ, ಮತ್ತು ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದರು. 1907ರಲ್ಲಿ ಮೈಸೂರು ಪ್ರತಿನಿಧಿ ಸಭೆಯನ್ನು ದ್ವಿಸಭಾ ವ್ಯವಸ್ಥೆಯಾಗಿ ಪರಿವರ್ತಿಸಿದರು. ಅವರು ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರಾಗಿದ್ದು, ಬನಾರಸ್ ಹಿಂದು ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಸೈನ್ಸ್ ಸ್ಥಾಪಿಸಲು 371 ಎಕರೆ ಭೂಮಿಯನ್ನು ದಾನವಾಗಿ ನೀಡಿದರು. ಬೆಂಗಳೂರಿನಲ್ಲಿ ಎಚ್.ಎ.ಎಲ್ ಸ್ಥಾಪಿಸಲು ನೆರವಾದರು ಎಂದು ಶ್ಲಾಘಿಸಿದರು.

ನಾಲ್ವಡಿ ಅವರು ಸಂಗೀತದಲ್ಲಿ ಪರಿಣಿತರಾಗಿದ್ದು, ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತವನ್ನು ಪ್ರೋತ್ಸಾಹಿಸಿದರು. ಅವರು ಫ್ಲೂಟ್, ವೈಲಿನ್, ಸ್ಯಾಕ್ಸೋಫೋನ್, ಪಿಯಾನೋ, ಮೃದಂಗ, ನಾದಸ್ವರ, ಸೀತಾರ್ ಮತ್ತು ವೀಣೆಯಂತಹ ಎಂಟು ಸಂಗೀತ ಸಾಧನಗಳಲ್ಲಿ ಪರಿಣಿತರಾಗಿದ್ದರು. ಅವರ ಕಾಲದಲ್ಲಿ ಮೈಸೂರು ರಾಜ್ಯ ಏಷ್ಯಾದಲ್ಲಿ ಮೊದಲ ಹೈಡ್ರೋಎಲೆಕ್ಟ್ರಿಕ್ ವಿದ್ಯುತ್ ಉತ್ಪಾದನೆ ಮಾಡಿದ ರಾಜ್ಯವಾಗಿದ್ದು, ಬೆಂಗಳೂರು ಮೊದಲ ಏಷ್ಯನ್ ನಗರವಾಗಿ ಬೀದಿ ದೀಪಗಳನ್ನು ಹೊಂದಿತು ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ದೇಶಕ್ಕೆ ಮಾದರಿ. ಅವರ ಆಡಳಿತ, ಸಾಮಾಜಿಕ ಸೇವೆ ಅನನ್ಯ. ಜನರ ಸಮಸ್ಯೆಗಳನ್ನು ಬಗ್ಗೆ ಅವರಿಗೆ ಅರಿವಿತ್ತು. ಮಂಡ್ಯ ಜಿಲ್ಲೆ ಶ್ರೀಮಂತವಾಗಿ ಸಮೃದ್ದಿಯಾಗಿದೆ. ಇದಕ್ಕೆ ನಾಲ್ವಡಿ ಅವರ ಕೊಡುಗೆ ಕಾರಣ ಎಂದು ಶ್ಲಾಘಿಸಿದರು.

ಕನ್ನಡ ಭಾಷೆ ಉಳಿದು, ಬೆಳೆಯುತ್ತಿದ್ದರೆ ಅದು ಮಂಡ್ಯದಿಂದ. ರಾಜಕೀಯವಾಗಿ ಸಹ ಮಂಡ್ಯ ಹೆಸರು ಮಾಡಿದೆ. ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಡ್ಯ ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನಾಗಿ ಕೊಟ್ಟಿದೆ. ಈ ಜಿಲ್ಲೆಯ ಹಲವು ಬೇರೆ ಜಿಲ್ಲೆಗೆ ಹೋಗಿ ರಾಜಕಾರಣ ಮಾಡಿದ್ದಾರೆ. ಇಲ್ಲಿ ಹುಟ್ಟಿದ ನಾನು ಕೋಲಾರದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದೆ ಎಂದು ಹೇಳಿದರು.

ವೈದ್ಯ ಹಾಗೂ ಸಾಹಿತಿ ಡಾ.ಚಂದ್ರಶೇಖರ್, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ, ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ನಾಗೇಶ್ ರಾಗಿಮುದ್ದನಹಳ್ಳಿ, ರೂಪ ಹೊಸಹಳ್ಳಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬಿ.ಸುನೀಲ್ಕುಮಾರ್, ಎಲ್.ಬಿ.ಮಂಜುನಾಥ್, ಮೀನಕೆರೆ ಆಂಜನಪ್ಪ, ಆರ್.ಭರಣಿ ಹರೀಶ್, ಡಾ.ನಾಗೇಶ್, ಎಂ.ಬಾಬು, ಸುಖಾನಂದಶೆಟ್ಟಿ, ಪಿ.ಎನ್.ಶ್ರೀನಾಥ್, ರಾಮಕೃಷ್ಣಯ್ಯ, ಎಚ್.ಟಿ.ಪಾರ್ವತಮ್ಮ, ಸಿರಿಗಂಧ ರಾಮಕೃಷ್ಣ, ಡಾ.ಶ್ರೀಧರ್ ಹೆಗ್ಡೆ, ಕೆ.ಎನ್.ರಾಮು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net