ಯೋಜನೆ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಿ

29 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಕಾಶಿ ಹೆಸರಿಗೆ ತಕ್ಕಂತೆ ಜಿಲ್ಲೆಯಲ್ಲಿ ಶೈಕ್ಷಣಿಕ ಬದಲಾವಣೆ ಹಾಗೂ ಸುಧಾರಣೆಗೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಮತ್ತು ಮಕ್ಕಳಲ್ಲಿನ ಕಲಿಕಾ ಶಕ್ತಿ ಪ್ರೋತ್ಸಾಹಿಸಲು ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಮಿಷನ್​ ವಿದ್ಯಾಕಾಶಿ ಯೋಜನೆ ಆರಂಭಿಸಿದೆ. ಈ ಯೋಜನೆ ಯಶಸ್ಸಿಗೆ ಎಲ್ಲರೂ ಕೈ ಜೊಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಿಷನ್​ ವಿದ್ಯಾಕಾಶಿ 2024-25 ಯೋಜನೆ ಕುರಿತು ಸೋಮವಾರ ಏರ್ಪಡಿಸಿದ್ದ ಶಿಕ್ಷಣ ತಜ್ಞರ, ಶಾಲಾ ಶಿಕ್ಷಣ ಇಲಾಖೆ ಮತ್ತು ಡಯಟ್​ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಯೋಜನೆಯಲ್ಲಿ ಶಿಕ್ಷಣ ತಜ್ಞ ಪ್ರೊ. ಎಂ.ಎಸ್​. ಶಿವಪ್ರಸಾದ ನೇತೃತ್ವದ ತಂಡ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಲಹೆ, ಮಾರ್ಗದರ್ಶನದ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದೆ. ಶಾಲಾ ಶಿಕ್ಷಣ ಇಲಾಖೆ ಪ್ರತಿ ಅಧಿಕಾರಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಕ್ರಿಯಾಶೀಲವಾಗಿ ಓದು, ಬರಹ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿದಾಗಲೇ ಯಶಸ್ಸು ಸಾಧ್ಯ ಎಂದರು.
ಮಿಷನ್​ ವಿದ್ಯಾಕಾಶಿ ಕುರಿತು ಪ್ರೊ. ಎಸ್​.ಎಂ. ಶಿವಪ್ರಸಾದ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವು ಎಲ್ಲ ಪ್ರೌಢಶಾಲೆಗಳಲ್ಲಿ 100ಕ್ಕೆ 100ರಷ್ಟು ಆಗಬೇಕು. ರಾಜ್ಯಮಟ್ಟದ 100 ಸ್ಥಾನಗಳಲ್ಲಿ ಕನಿಷ್ಠ 30 ಸ್ಥಾನ ಜಿಲ್ಲೆಗೆ ಬರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕಠಿಣ ಪರಿಶ್ರಮ ಹಾಕಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್​.ಎಸ್​.ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯಟ್​ ಅಧಿಕಾರಿಗಳು, ಹಿರಿಯ ಉಪನ್ಯಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ತಜ್ಞರು, ಇತರರು ಇದ್ದರು. ಎಸ್ಸೆಸ್ಸೆಲ್ಸಿ ಜಿಲ್ಲಾ ನೋಡಲ್​ ಅಧಿಕಾರಿ ಡಾ. ರವಿಕುಮಾರ ಬಾರಾಟಕ್ಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net