

ಬೆಳಗಾವಿ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಕುರಿತು ಜನಜಾಗೃತಿ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿರುವ ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳು ಮುನ್ನೆಚ್ಚರಿಕೆ ಕ್ರಮವಾಗಿ ತಪ್ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ.ಮುನ್ಯಾಳ ಸಲಹೆ ನೀಡಿದ್ದಾರೆ.
ನಗರದ ವಾರ್ತಾ ಭವನದಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರೆಡ್‌ಕ್ರಾಸ್ ಸಂಸ್ಥೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್-19 ಎಲ್ಲೆಡೆ ಪಸರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅತೀ ಹೆಚ್ಚು ಜನರ ಸಂಪರ್ಕಕ್ಕೆ ಬರುವ ಮಾಧ್ಯಮ ಪ್ರತಿನಿಧಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅರೋಗ್ಯ ತಪಾಸಣೆಗೆ ಒಳಪಡುವ ಅಗತ್ಯವಿದೆ ಎಂದರು.
ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ನಿಕಟ ಸಂಪರ್ಕ ದಲ್ಲಿದ್ದು, ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಪ್ರತಿನಿಧಿಗಳ ಆರೋಗ್ಯವನ್ನೂ ಸಹ ತಪಾಸಣೆ ನಡೆಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್- 19ಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗುತ್ತಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಚೇರ್ಮನ್ ಅಶೋಕ ಬಾದಾಮಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ, ತಾಲೂಕು ಆರೋಗ್ಯಾಧಿಕಾರಿ ಡಾ.ಡುಮ್ಮಗೋಳ, ಡಾ.ಶಿವಾನಂದ ಗುಮ್ಮಗೋಳ, ಬಸವರಾಜ ಕೋಳುಚೆ, ಅವಧೂತ ಮಾನಗೆ ಇದ್ದರು.
ಡಾ.ಜಯಾನಂದ ಧನವಂತ, ಡಾ.ಸುಜಾತಾ ನಿಶಾನದಾರ, ಸವಿತಾ ಕಿತ್ತೂರ ಹಾಗೂ ಮಾಧುರಿ ಕೆಂಗಾರಿ ನೇತೃತ್ವದ ತಂಡ 92ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳ ತಪಾಸಣೆ ನಡೆಸಿದರು. ತಪಾಸಣೆಗೆ ಒಳಗಾದ ಮಾಧ್ಯಮ ಪ್ರತಿನಿಧಿಗಳ ಪೈಕಿ ಯಾರಲ್ಲಿಯೂ ಕೋವಿಡ್-19ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ. ಜಯಾನಂದ ಧನವಂತ ತಿಳಿಸಿದ್ದಾರೆ.