

ಮೈಸೂರು: ಸಾಂಘಿಕ ಪ್ರದರ್ಶನ ಮುಂದುವರೆಸಿರುವ ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಖೋ-ಖೋ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಮೈಸೂರು ವಿವಿ ತಂಡದ ಜತೆಗೆ ಜಲಂಧರ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ, ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ಹಾಗೂ ಡಾ.ಎಎಂಯು ಔರಂಗಬಾದ್ ವಿಶ್ವವಿದ್ಯಾಲಯ ತಂಡಗಳು ಉಪಾಂತ್ಯಕ್ಕೆ ಲಗ್ಗೆ ಇಟ್ಟಿವೆ.
ಗುರುವಾರ ಬೆಳಗ್ಗೆ 8.30 ಸೆಮಿ ಫೈನಲ್ ಪಂದ್ಯಗಳು ಆರಂಭವಾಗಲಿದ್ದು, ಮೈಸೂರು ವಿಶ್ವವಿದ್ಯಾಲಯ ತಂಡ ಡಾ.ಎಎಂಯು ಔರಂಗಬಾದ್ ವಿರುದ್ಧ ಹೋರಾಡಲಿದೆ. ಮತ್ತೊಂದು ಪಂದ್ಯದಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ತಂಡ ಜಲಂಧರ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ ತಂಡದ ವಿರುದ್ಧ ಸೆಣಸಲಿದೆ.
ಮೈಸೂರು ತಂಡಕ್ಕೆ ರೋಚಕ ಜಯ: ಕೆ.ಆರ್.ತೇಜಸ್ವಿನಿ ಮತ್ತು ಎಲ್.ಮೋನಿಕಾ ಅವರ ಅಮೋಘ ಪ್ರದರ್ಶನದ ನೆರವಿನಿಂದ ಮೈಸೂರು ವಿಶ್ವವಿದ್ಯಾಲಯ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ರೋಚಕ ಜಯ ಪಡೆಯಿತು. ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನ ಒಳಾಂಗಣದ ಮ್ಯಾಟ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ವಿಶ್ವವಿದ್ಯಾಲಯ ತಂಡವನ್ನು 2 ಅಂಕಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.
ಮೊದಲ ಇನಿಂಗ್ಸ್‌ನಲ್ಲಿ 4-3 ಅಂಕಗಳ ಅಂತರದ ಮುನ್ನಡೆ ಕಾಯ್ದುಕೊಂಡ ಮೈಸೂರು ತಂಡ ಎರಡನೇ ಇನಿಂಗ್ಸ್‌ನಲ್ಲೂ ಅದೇ ಲಯದ ಆಟ ಮುಂದುವರೆಸಿ 9-7 ಅಂಕ ಗೆಲುವಿನ ನಗೆ ಬೀರಿತು. ಟಾಸ್ ಗೆದ್ದು ಡಿಫೆನ್ಸ್ ಆಯ್ದುಕೊಂಡ ಮೈಸೂರು ವಿವಿ ತಂಡ ಪರ ಭರವಸೆ ಆಟಗಾರ್ತಿ ಕೆ.ಆರ್.ತೇಜಸ್ವಿನಿ ಮೊದಲ ಇನಿಂಗ್ಸ್‌ನಲ್ಲಿ 4.20 ನಿಮಿಷ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 3.40 ನಿಮಿಷ ಆಡಿಸಿದರು. ಎಲ್.ಮೋನಿಕಾ ಮೊದಲ ಇನಿಂಗ್ಸ್‌ನಲ್ಲಿ 1.30 ನಿಮಿಷ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 1.40 ನಿಮಿಷ ಆಡಿಸುವ ಜತೆಗೆ ಎರಡು ಇನಿಂಗ್ಸ್‌ನಲ್ಲೂ ತಲಾ 3 ಅಂಕ ಪಡೆದು ತಂಡದ ಗೆಲುವಿನ ರುವಾರಿಯಾದರು.
ಎಸ್.ಮೇಘನಾ ಎರಡು ಇನಿಂಗ್ಸ್‌ನಿಂದ ತಲಾ ಒಂದು ಅಂಕ ಪಡೆದರು. ಬಿ.ಚೈತ್ರಾ ಮೊದಲ ಇನಿಂಗ್ಸ್‌ನಲ್ಲಿ 2.10 ನಿಮಿಷ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 1.40 ಆಡಿಸುವ ಜತೆಗೆ ಒಂದು ಅಂಕ ಪಡೆದು ಗಮನ ಸೆಳೆದರು. ಮುಂಬೈ ಪರ ರೇಷ್ಮಾ, ಅಪೇಕ್ಷಾ, ರೂಪಾಲಿ ಉತ್ತಮ ಪ್ರದರ್ಶನ ನೀಡಿದರು.