

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ಹಾಗೂ ಬಂಡವಾಳಶಾಹಿ ನೀತಿಗಳ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಸೆ. 4ರಂದು ಬೆಳಗ್ಗೆ 11 ಗಂಟೆಗೆ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ಅಖಿಲ ಭಾರತ ಕಾರ್ವಿುಕರ ಪ್ರತಿಭಟನೆ ಸಂಘಟಿಸಲಾಗಿದೆ ಎಂದು ಸೆಂಟರ್ನ ರಾಜ್ಯ ಉಪಾಧ್ಯಕ್ಷ ವೀರೇಶ ಎನ್.ಎಸ್. ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ 2 ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಬಾರದು ಎಂಬ ಶರತ್ತಿನ ಮೇರೆಗೆ ದೆಹಲಿ ಪೊಲೀಸ್ರು ಅನುಮತಿ ನೀಡಿದ್ದಾರೆ. ಹಾಗಾಗಿ ರಾಜ್ಯದಿಂದ 150ರಿಂದ 180 ಜನ ಪಾಲ್ಗೊಳ್ಳುವರು. ಸೆಂಟರ್ನ ಅಖಿಲ ಭಾರತ ಅಧ್ಯಕ್ಷ ಕೆ. ರಾಧಾಕೃಷ್ಣ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷರಾದ ಸ್ವಪನ್ ಘೊಷ್, ಅರುಣಕುಮಾರ ಸಿಂಗ್, ಪ್ರಧಾನ ಕಾರ್ಯದರ್ಶಿ ಶಂಕರ ದಾಸ್ ಗುಪ್ತಾ ಮತ್ತು ವಿವಿಧ ರಾಜ್ಯಗಳ ಕಾರ್ವಿುಕ ಮುಖಂಡರು ಪಾಲ್ಗೊಳ್ಳುವರು ಎಂದು ಹೇಳಿದರು.
ಕಾರ್ವಿುಕರ ಹಕ್ಕುಗಳನ್ನು ಕಸಿದುಕೊಳ್ಳುವ 4 ಕಾರ್ವಿುಕ ಸಂಹಿತೆಗಳನ್ನು ತಕ್ಷಣ ರದ್ದುಗೊಳಿಸಬೇಕು, ಸಾರ್ವಜನಿಕ ವಲಯ ಮತ್ತು ಸರ್ಕಾರಿ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು, ಕೆಲಸದ ಅವಧಿ ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ ಮೀರಬಾರದು, ಕಾಯಂ ನೌಕರರ ಸಂಖ್ಯೆಯ ಕಡಿತ ಮಾಡಬಾರದು, ಅಸಂಘಟಿತ ವಲಯದ ಎಲ್ಲ ಕಾರ್ವಿುಕರಿಗೆ ಕಲ್ಯಾಣ ಮಂಡಳಿ ರಚಿಸಿ ಸಾಮಾಜಿಕ ಭದ್ರತೆ ಖಾತರಿಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಮೇಟಿ, ಗಂಗಾಧರ ಬಡಿಗೇರ, ಲಲಿತಾ ಪದ್ಮಜ, ಇತರರು ಇದ್ದರು.