ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕರೆ

aivm
Published on

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಜಾತಿಗಣತಿಯಲ್ಲಿ ಸಮಾಜ ಬಾಂಧವರು ತಪ್ಪದೇ ಭಾಗವಹಿಸಿ, ಎಲ್ಲರೂ ವೀರಶೈವ ಲಿಂಗಾಯತ ಎಂದು ಬರೆಯಿಸುವ ಮೂಲಕ ಸಮಾಜದ ಅಖಂಡತೆಯನ್ನು ಪ್ರದರ್ಶಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ (ಅಭಾವೀಮ) ಕರೆ ನೀಡಿದೆ. ಅಭಾವೀಮ ಕೇಂದ್ರ ಕಚೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಈಶ್ವರ ಖಂಡ್ರೆ, ಅನುಸೂಚಿಯ ಧರ್ಮದ ಕಾಲಂನಲ್ಲಿ ಇತರೇ ಎಂದು ನೀಡಿರುವ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸಬೇಕು. ಜಾತಿಯ ಕಾಲಂನಲ್ಲಿ ವೀರಶೈವ, ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಎಂದು ಮತ್ತು ಉಪಜಾತಿ ಕಾಲಂನಲ್ಲಿ ತಾವು ಸೇರಿದ ಉಪಜಾತಿಯ ಸಂಕೇತ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಬರೆಸಬೇಕು. ಇವುಗಳ ಜೊತೆಗೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ಪಷ್ಟವಾಗಿ ಗಣತಿದಾರರಿಗೆ ನೀಡಿ, ತಾವು ನೀಡಿದ ಮಾಹಿತಿಯನ್ನು ಸರಿಯಾಗಿ ದಾಖಲಿಸಿಕೊಂಡಿದ್ದಾರೆಯೇ ಎಂಬುದುನ್ನು ಖಚಿತಪಡಿಸಿಕೊಂಡು ಒಪ್ಪಿಗೆ ನೀಡಬೇಕು. ಆಯೋಗವು ಕೈಪಿಡಿಯನ್ನು ಬಿಡುಗಡೆ ಮಾಡಿದ ನಂತರ ಅಧಿಕೃತ ಮಾಹಿತಿಯನ್ನು ಸಮಾಜದ ಗಮನಕ್ಕೆ ತರಲಾಗುವುದು. ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿಯನ್ನು ಆಧರಿಸಿ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗಲಿದೆ. ಈಗಾಗಲೇ ಈ ಕುರಿತು ಸಮಾಜದ ಎಲ್ಲ ಪಕ್ಷಗಳ ಶಾಸಕರು, ಸಚಿವರು, ಮುಖಂಡರು ಹಾಗೂ ಕೆಲ ಮಠಾಧೀಶರೊಂದಿಗೆ ಚರ್ಚೆ ನಡೆದಿದ್ದು, ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಏಕಮತ್ಯವನ್ನು ಪ್ರದರ್ಶಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಭಾವೀಮ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ, 1995ರ ಹಿಂದುಳಿದ ಆಯೋಗಗಳ ಕಾನೂನಿಂತೆ ಪ್ರತಿ 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಬೇಕಾದ್ದು ಸರ್ಕಾರದ ಜವಾಬ್ದಾರಿ. ಆದರೆ ಈ ಹಿಂದೆ ಸರ್ಕಾರ ನಡೆಸಿದ ಸಮೀಕ್ಷೆ ತಪ್ಪು ಮಾಹಿತಿಯಿಂದ ಕೂಡಿದ್ದು, ಈ ಬಾರಿ ಪಾರದರ್ಶಕವಾಗಿ ಸಮೀಕ್ಷೆ ನಡೆಸಬೇಕು. ನಿಯಮಾವಳಿ ಪ್ರಕಾರ ಸಾಮಾಜಿಕ ಸ್ಥಿತಿಗತಿಗನುಗುಣವಾಗಿ ನೀಡುವ ಅಂಕಗಳನ್ವಯ ಪ್ರವರ್ಗವನ್ನು ನಿಗದಿಪಡಿಸಿ ಅದರಿಂದ ಸಮಾಜದ ಬಂಧುಗಳಿಗೆ ಸೌಲಭ್ಯಗಳು ಸಿಗುವಂತಾಗಬೇಕು. ವೀರಶೈವ ಲಿಂಗಾಯತ ಸಮಾಜದಲ್ಲಿ ಬಡವರು, ಅತಿಬಡವರು, ಹಿಂದುಳಿದವರ ಸಂಖ್ಯೆ ಹೆಚ್ಚಾಗಿದ್ದು, ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗಗಳಿಂದ ಸಮಾಜಕ್ಕಾದ ಅನ್ಯಾಯ ಮರುಕಳಿಸಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ, ಉಪಾಧ್ಯಕ್ಷರಾದ ಬಿ.ಎಸ್. ಸಚ್ಚಿದಾನಂದಮೂರ್ತಿ, ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ವೀಣಾ ಕಾಶಪ್ಪನವರ, ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ, ಮನೋಹರ ಅಬ್ಬಿಗೆರೆ, ಕಲ್ಪನಾ ಹಿರೇಮಠ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಠಿಣ ಕ್ರಮದ ಎಚ್ಚರಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮೂಲಕ ಸಮಾಜದ ಬೃಹತ್ ಪ್ರಾತಿನಿಧಿಕ ಸಂಸ್ಥೆಯನ್ನು ಹುಟ್ಟು ಹಾಕಿರುವ ಹಾನಗಲ್ ಕುಮಾರಸ್ವಾಮಿಗಳ ವಿರುದ್ಧ ಯಾರೇ ಲಘುವಾಗಿ ಮಾತನಾಡುವುದು, ಟೀಕೆ ಮಾಡುವುದನ್ನು ಮಹಾಸಭೆ ಸಹಿಸುವುದಿಲ್ಲ. ಅಂತಹ ಘಟನೆಗಳು ಮಹಾಸಭೆಯ ಗಮನಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಶ್ವರ ಖಂಡ್ರೆ ಎಚ್ಚರಿಸಿದರು. ಹಿಂದೆ ಮಹಾಸಭೆಯ ಅಧ್ಯಕ್ಷರಾಗಿದ್ದ ಸಿದ್ಧಗಂಗೆ ಶ್ರೀಶಿವಕುಮಾರ ಸ್ವಾಮೀಜಿಯವರು ವೀರಶೈವ ಲಿಂಗಾಯತ ಎರಡೂ ಒಂದೇ ಎಂಬುದನ್ನು ಸಾಭೀತುಪಡಿಸಿದ್ದು, ಅವರ ಆದೇಶವನ್ನು ಎಲ್ಲರೂ ಪಾಲಿಸಬೇಕಿದೆ ಎಂದರು.

ಬಸವಣ್ಣನವರ ಹೆಸರಲ್ಲಿ ವಿಘಟನೆ ಸಲ್ಲದು

ಅಭಾವೀಮ ಅಧಿವೇಶನದ ಒತ್ತಾಯದಂತೆ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ೋಷಣೆ ಮಾಡಿದೆ. ಅದಕ್ಕೆ ಸಂಬಂಧಪಟ್ಟಂತೆ ಬಸವ ಸಂಸ್ಕೃತಿ ಉತ್ಸವ ಈಗಾಗಲೇ ಆರಂಭವಾಗಿದ್ದು, ಮಹಾಸಭೆಯ ಸ್ಥಳೀಯ ಘಟಕಗಳು ಬೆಂಬಲವಾಗಿ ನಿಂತಿವೆ. ಆದರೆ ಬಸವಣ್ಣನವರ ಹೆಸರನ್ನು ಬಳಕೆ ಮಾಡಿಕೊಂಡು ಸಮಾಜವನ್ನು ವಿಘಟಿಸುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಅಭಾವೀಮ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು. ನಮ್ಮ ಧರ್ಮದ ಪ್ರಚಾರ ಮಾಡಲು ನಾವು ಸ್ವತಂತ್ರರು. ಆದರೆ ಕೆಲವು ಪ್ರಬುದ್ಧರೆನಿಸಿಕೊಂಡಿರುವವರು ನಮ್ಮ ಕಾರ್ಯಕ್ರಮಗಳಲ್ಲಿ ಬೇರೆ ಧರ್ಮದ ಬಗ್ಗೆ, ಪರಂಪರೆಯ ಬಗ್ಗೆ, ಆಚರಣೆಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net