

ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಡಿ.23 ಮತ್ತು 24ರಂದು ದಾವಣಗೆರೆಯ ಎಂಬಿಎಂ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಶಿವಮೂರ್ತಿ ಕಾನ್ಯ ತಿಳಿಸಿದರು.
ಮಹಾಧಿವೇಶನದಲ್ಲಿ ಹಿರಿಯ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು, ಸಾಹಿತಿಗಳು, ಕಲಾವಿದರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಸಮಾವೇಶದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಮಹಿಳಾ ಅಧಿವೇಶನ, ಸಾಂಸ್ಕೃತಿಕ ಪರಂಪರೆ ವಿಷಯ ಕುರಿತು ಗೋಷ್ಠಿಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಅಧಿವೇಶನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ. ಸಭೆಯ ಇತಿಹಾಸ, ಕಾರ್ಯ ಚಟುವಟಿಕೆಗಳನ್ನು ಪರಿಚಯಿಸುವ ವಸ್ತುಪ್ರದರ್ಶನವಿದೆ. ಭಾಗವಹಿಸಲು ಇಚ್ಛಿಸುವರರು 500 ರೂ. ಪಾವತಿಸಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್.ಕೆ. ಚನ್ನಪ್ಪ, ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಸುರೇಶ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪ್ರಕಾಶ್ ಇದ್ದರು.