

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿ ಎದುರು ಪ್ರತ್ಯೇಕ ಎರಡು ಪ್ರತಿಭಟನೆ ನಡೆಯಿತು.
ಕನಿಷ್ಠ ಕೂಲಿ ಹಾಗೂ ವ್ಯತ್ಯಸ್ಥ ತುಟ್ಟಿ ಭತ್ಯೆ ಪಾವತಿ ಮುಂದೂಡುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ನಾನಾ ಘೋಷಣೆ ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವ್ಯತ್ಯಸ್ಥ ತುಟ್ಟಿ ಭತ್ಯೆ ಪಾವತಿಯನ್ನು 2021ರ ಮಾರ್ಚ್ 31ರವರೆಗೆ ಮುಂದೂಡಲಾಗಿದೆ ಎಂದು ರಾಜ್ಯ ಸರ್ಕಾರ ಜು.20ರಂದು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ತಿಂಗಳಿಗೆ ಕೇವಲ 11 ಸಾವಿರ ರೂ. ಅಲ್ಪ ವರಮಾನವಿರುವ ಬಡ ಕಾರ್ಮಿಕರು ಹಾಗೂ ಅವರ ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದೆ. ಸರ್ಕಾರದ ಕಾನೂನು ಬಾಹಿರ ಕ್ರಮವನ್ನು ನ್ಯಾಯಾಲಯಗಳು ಅನೇಕ ಕಾರಣಗಳಿಗೆ ತಳ್ಳಿ ಹಾಕಿವೆ. ಕನಿಷ್ಠ ಕೂಲಿ ಕಾಯ್ದೆಯಡಿ ಪಾವತಿಯನ್ನು ಮುಂದೂಡಲು ಅವಕಾಶವಿಲ್ಲ. ಆದ್ದರಿಂದ, ರಾಜ್ಯ ಸರ್ಕಾರದ ಈ ಕ್ರಮ ಕಾನೂನು ಬಾಹಿರವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮಾಲೀಕರ ಲಾಬಿಗೆ ಮಣಿದಿದೆ. ಕೋವಿಡ್-19 ನೆಪದಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹೆಚ್ಚುವರಿಯಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿದ್ದು, ಕಾರ್ಮಿಕರ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಈ ಕೂಡಲೇ ಕಾರ್ಮಿಕ ವಿರೋಧಿ ಕ್ರಮವನ್ನು ಕೈಬಿಟ್ಟು ಅಧಿಸೂಚನೆಯನ್ನು ಹಿಂಪಡೆದು ತುಟ್ಟಿಭತ್ಯೆ ಪಾವತಿಯನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಸಮಿತಿ ಉಪಪ್ರಧಾನ ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಉಪಾಧ್ಯಕ್ಷರಾದ ಕೆ.ಜಿ.ಸೋಮರಾಜೇ ಅರಸ್, ಜಗನ್ನಾಥ್, ಕಾರ್ಯದರ್ಶಿಗಳಾದ ಕೆ.ಎಸ್.ರೇವಣ್ಣ, ಎಂ.ಶಿವಣ್ಣ, ರಾಮು ಇತರರಿದ್ದರು.