ಅನ್ನಬ್ರಹ್ಮನ ಸನ್ನಿಧಿಯಲ್ಲಿ 'ಜ್ಞಾನ' ದೀಪೋತ್ಸವ...

UDP-21-2-Sammelana
ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿರುವ ಉಡುಪಿ ರಾಜಾಂಗಣ.
Published on

ಉಡುಪಿಯಲ್ಲಿ ಅ.24ರಿಂದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ

ದೇಶ-ವಿದೇಶಗಳ 1,500ಕ್ಕೂ ಅಧಿಕ ವಿದ್ವಾಂಸರ ಸಮಾಗಮ

ಪ್ರಶಾಂತ ಭಾಗ್ವತ, ಉಡುಪಿ
ಬೆಳಕಿನ ಹಬ್ಬ ದೀಪಾವಳಿಗೂ ಮುನ್ನ ಕೃಷ್ಣ ನಗರಿ ಉಡುಪಿಯಲ್ಲಿ ಜ್ಞಾನ ದೀಪೋತ್ಸವ ನಡೆಯಲಿದೆ. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಸಹಭಾಗಿತ್ವದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್​ ಪರಿಷತ್​ ವತಿಯಿಂದ ಅ.24ರಿಂದ ಅ.26ರ ವರೆಗೆ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಆಯೋಜಿಸಲಾಗಿದೆ.

ಸುಮಾರು 118 ದೇಶಗಳ 1,500ಕ್ಕೂ ಅಧಿಕ ಪ್ರಖ್ಯಾತ ವಿದ್ವಾಂಸರು ಭಾಷೆ ಮತ್ತು ಸಂಸ್ಕೃತಿಯ ಕುರಿತಾಗಿ ವಿಚಾರ, ಅಧ್ಯಯನ ವರದಿ ಮಂಡಿಸಲಿದ್ದಾರೆ. ಯೋಗ ಆಯುರ್ವೇದ, ವೈಷ್ಣವ ಭಕ್ತಿ, ಭಗವದ್ಗೀತೆ, ಇರಾನಿಯನ್​ ಭಾಷೆಗೂ ಸಂಬಂಧಿಸಿ ವಿವಿಧ 23 ವಿಷಯಗಳ ಗೋಷ್ಠಿ ನಡೆಯಲಿದೆ.

ಪ್ರೊ. ಸರೋಜಾ ಭಾಟೆ ಅಧ್ಯಕ್ಷತೆ

ಮೂರು ದಿನದ ಈ ಸಮ್ಮೇಳನದಲ್ಲಿ 25ಕ್ಕೂ ಅಧಿಕ ವಿಶ್ವ ವಿದ್ಯಾನಿಲಯಗಳ ಉಪಕುಲಪತಿಗಳು, 300ಕ್ಕೂ ಅಧಿಕ ಸಂಸ್ಕೃತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಯಕ್ಷ ನೃತ್ಯ, ಡ್ರಾಮಾ, ಕವಿಗೋಷ್ಠಿ, ಪಂಡಿತಾ ಪರಿಷತ್​, ಅಷ್ಟಾವಧಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ. ಪುಣೆ ಯುನಿವರ್ಸಿಟಿಯ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಸರೋಜಾ ಭಾಟೆ ಸಮ್ಮೇಳನದ ಸಂಪೂರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಧು-ಸಂತರ ಆಗಮನ

ಅ.24ರಂದು ಸಮ್ಮೇಳನದ ಉದ್ಘಾಟನೆಯಲ್ಲಿ ಪೇಜಾವರ ವಿಶ್ವಪ್ರಸನ್ನ ಶ್ರೀ, ಪರ್ಯಾಯ ಪುತ್ತಿಗೆ ಶ್ರೀ, ವ್ಯಾಸರಾಜ ಮಠಾಧೀಶರು, ಮಂತ್ರಾಲಯದ ಸುಭುದೇಂದ್ರ ಶ್ರೀ, ಭಂಡಾರಕೇರಿ ಶ್ರೀ ಸೇರಿದಂತೆ ಅನೇಕ ಸಾಧು-ಸಂತರು ಪಾಲ್ಗೊಳ್ಳಲಿದ್ದಾರೆ. ಪತಂಜಲಿ ಯೋಗ ವಿಶ್ವ ವಿದ್ಯಾಲಯದ ಸಂಸ್ಥಾಪಕ ಬಾಬಾ ರಾಮದೇವ್​ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದ ಸಹಭಾಗಿತ್ವ

ಯುನಿವರ್ಸಿಟಿ ಆಫ್​ ಪತಂಜಲಿ ಹರಿದ್ವಾರ, ಕರ್ನಾಟಕ ಸಂಸತ್​ ಕಾಲೇಜ್​ ಟೀಚಿಂಗ್​ ಆ್ಯಂಡ್​ ನಾನ್​ಟೀಚಿಂಗ್​ ಅಸೋಸಿಯೇಷನ್​, ಪೂರ್ಣಪ್ರಜ್ಞಾ ವಿದ್ಯಾಪೀಠ ಬೆಂಗಳೂರು, ಸಂಸ್ಕೃತ ಭಾರತೀ ಬೆಂಗಳೂರು, ವೇದ ವಿಜ್ಞಾನ ಬೆಂಗಳೂರು, ಮಣಿಪಾಲ್​ ಯುನಿರ್ವಸಿಟಿ, ಪುತ್ತಿಗೆ ಮಠ, ಎಸ್​ಎಂಎಸ್​ಸಿ ಕಾಲೇಜ್​ ಉಡುಪಿ ಇವರ ಸಹಭಾಗಿತ್ವದಲ್ಲಿ ಸಮ್ಮೇಳನ ನಡೆಯಲಿದೆ.

ಭಾರತೀಯ ವಿದ್ವತ್​ ಪರಿಷತ್​ ಟ್ರಸ್ಟ್​ನ ಪ್ರಮುಖರಾದ ಹಿರಿಯ ವಿದ್ವಾಂಸ ಪ್ರೊ. ವೀರನಾರಾಯಣ ಆಚಾರ್ಯ ಪಾಂಡುರಂಗಿ, ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ. ಶ್ರೀನಿವಾಸ್​ ವರಖೇಡಿ ಸಂಘಟನೆಯಲ್ಲಿ ಸಮ್ಮೇಳನ ನಡೆಯುತ್ತಿದೆ. ಕರ್ನಾಟಕ ಸಂಸ್ಕೃತ ವಿವಿ ಬೆಂಗಳೂರಿನ ಪ್ರೊ. ಶಿವಾನಿ ವಿ. ಸ್ಥಾನಿಕ ಸಚಿವೆಯಾಗಿ ಹಾಗೂ ಸಮ್ಮೇಳನದ ಸಚಿವೆಯಾಗಿ ನಾಗ್ಪುರ ಸಂಸ್ಕೃತ ವಿವಿಯ ಪ್ರೊ. ಕವಿತಾ ಹೊಳೆ ಕಾರ್ಯ ನಿರ್ವಹಿಸಲಿದ್ದಾರೆ.

ಶತಮಾನಗಳ ಐತಿಹ್ಯ ಹೊಂದಿದ ಸಮ್ಮೇಳನ

ಭಾರತದ ಪ್ರಾಚೀನ ಸಂಸ್ಕೃತಿ, ಸಾಂಪ್ರದಾಯಿಕ ಭಾಷೆಗಳ ರಕ್ಷಣೆ ಕುರಿತಾಗಿ ಪ್ರತಿ 2 ವರ್ಷಕ್ಕೊಮ್ಮೆ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಆಯೋಜಿಸಲಾಗುತ್ತದೆ. ವಿವಿಧ ಭಾಷೆಗಳ ಸಾವಿರಾರು ವಿದ್ವಾಂಸರು ಉಪಸ್ಥಿತರಿರುವುದು ಈ ಸಮ್ಮೇಳನದ ವಿಶೇಷತೆ. ದೇಶದಲ್ಲಿ ಬ್ರಿಟಿಷ್​ ಆಡಳಿತ ಅವಧಿಯಲ್ಲಿ 1919ರಲ್ಲಿ ಪುಣೆಯಲ್ಲಿ ಮೊದಲ ಸಮ್ಮೇಳನ ನಡೆದಿತ್ತು. 105 ವರ್ಷಗಳ ಐತಿಹ್ಯ ಹೊಂದಿರುವ ಈ ಮಹಾಸಭೆ, ಕೋವಿಡ್​ ಸಂದರ್ಭದಲ್ಲಿ ಒಮ್ಮೆ ನಡೆದಿರಲಿಲ್ಲ. ಕರ್ನಾಟಕದಲ್ಲಿ 1975ರಲ್ಲಿ ಮೊದಲ ಬಾರಿಗೆ ಈ ಸಮ್ಮೇಳನ ನಡೆದಿದ್ದು, ಉಡುಪಿಯಲ್ಲಿ ನಡೆಯುತ್ತಿರುವುದು 2ನೇ ಸಮ್ಮೇಳನವಾಗಿದೆ.

ಕನ್ನಡ ಗೋಷ್ಠಿ, ಮಹಿಳಾ ಶಾಸ್ತ್ರ ಸಭೆ

ಅನೇಕ ವಿದ್ವಾಂಸರು ಕನ್ನಡ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ ಕುರಿತಾಗಿಯೂ ವಿಚಾರ ಮಂಡಿಸಲಿದ್ದಾರೆ. ಕರ್ನಾಟಕ ಸಂಸ್ಕೃತ ವಿವಿಯ ಹಿಂದಿನ ಕುಲಪತಿ ಪ್ರೊ. ಮಲ್ಲೇಪುರ ವೆಂಕಟೇಶ್​ ಈ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಕೃತದಲ್ಲಿ ಸಾಧನೆ ಮಾಡಿದ ಯುವತಿಯರಿಗೆಂದೇ ಅ.25ರಂದು ಮಧ್ಯಾಹ್ನ 'ಮಹಿಳಾ ಶಾಸ್ತ್ರ ಸಭೆ' ಆಯೋಜಿಸಲಾಗಿದೆ. ಸಂಸ್ಕೃತ ಮತ್ತು ಕಂಪ್ಯೂಟರ್​ನ ಸಂಬಂಧ, ಸಂಸ್ಕೃತ ಬಾಲ ಸಾಹಿತ್ಯ ಗೋಷ್ಠಿ ವಿಶೇಷ ಆಯೋಜನೆಯಾಗಿದೆ.

ಅನ್ನಬ್ರಹ್ಮನ ನಾಡಿನಿಂದ ಸಮಸ್ತ ಭಾರತದ ಮುಂದಿನ ಪೀಳಿಗೆಗೆ ಜ್ಞಾನದ ಬೆಳಕು ಪಸರಿಸುವ ಮಹತ್ವದ ಐತಿಹಾಸಿಕ ಸಮ್ಮೇಳನವಿದು. ಕೇವಲ ಸಂಸ್ಕೃತ ಭಾಷೆಯಷ್ಟೇ ಅಲ್ಲದೆ ಪಾಲಿ, ಪಾಕೃತ, ಬುದ್ಧಿಸಂ ಹಾಗೂ ಜೈನಿಸಂ ಸೇರಿದಂತೆ ನಶಿಸಿ ಹೋಗುತ್ತಿರುವ ಅನೇಕ ಭಾಷೆಗಳ ಕುರಿತಾಗಿ ವಿಚಾರ ಮಂಡನೆಯಾಗಲಿದೆ. ಸರ್ವರೂ ಸದುಪಯೋಗ ಮಾಡಿಕೊಳ್ಳಬೇಕು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ

ದೇಶ-ವಿದೇಶಗಳ ವಿದ್ವಾಂಸರು, ಪ್ರತಿಷ್ಠಿತ ವಿವಿಗಳ ಕುಲಪತಿಗಳು ವಿದ್ವತ್​ಪೂರ್ಣ ಪ್ರಬಂಧ ಮಂಡಿಸಲಿದ್ದಾರೆ. ಕನ್ನಡ ನಾಡಿನಲ್ಲಿ ಅನೇಕ ಭಾಷೆಗಳ ಸಮ್ಮಿಲನವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಶ್ರೀಕೃಷ್ಣ ಸನ್ನಿಧಿಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯಾಗಿದೆ. | ಪ್ರೊ. ವೀರನಾರಾಯಣ ಆಚಾರ್ಯ ಪಾಂಡುರಂಗಿ. ಸಂಚಾಲಕ, ಭಾರತೀಯ ವಿದ್ವತ್​ ಪರಿಷತ್​ ಟ್ರಸ್ಟ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net