

ಮಂಡ್ಯ: ಪ್ರಕೃತಿ ವೈಪರಿತ್ಯದಿಂದಾಗಿ ರೈತರು ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಾನಿಗೊಳಗಾದ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸವಲತ್ತು ದೊರೆಯುವಂತೆ ಕ್ರಮ ವಹಿಸಲು ದೇಶಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಂಘದ ಅಧ್ಯಕ್ಷ ಶ್ರೀಸಾಯಿರೆಡ್ಡಿ ಹೇಳಿದರು.
ಪ್ರಕೃತಿ ವಿಕೋಪದಿಂದ ದೇಶದ ಎಲ್ಲ ಭಾಗಗಳಲ್ಲಿಯೂ ವಿಪರೀತ ಮಳೆಯಾಗುತ್ತಿದೆ. ಇದರಿಂದ ಬೆಳೆಗೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಯಾ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಸ್ತಾನದಲ್ಲಿ ಸೋಯಾಬಿನ್ ಸೇರಿದಂತೆ ಹಲವು ಬೆಳೆ ಅತಿವೃಷ್ಠಿಯಿಂದ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 25 ಸಾವಿರ ರೈತರನ್ನು ಸಂಘಟಿಸಿ ಹೋರಾಟ ನಡೆಸಿದ ಪರಿಣಾಮ ಅಲ್ಲಿನ ಸರ್ಕಾರ ಪರಿಹಾರ ನೀಡಲು ಒಪ್ಪಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕುಂಭಮೇಳಕ್ಕೆ 10 ಸಾವಿರ ರೈತರ ಭೂಮಿಯನ್ನು ಶಾಶ್ವತವಾಗಿ ವಶಪಡಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿತ್ತು. 1 ಸಾವಿರ ಟ್ರ್ಯಾಕ್ಟರ್‌ಗಳೊಂದಿಗೆ ಸಾವಿರಾರು ರೈತರು ಹೋರಾಟ ನಡೆಸಿದ ಪರಿಣಾಮ 6 ತಿಂಗಳು ಕುಂಭಮೇಳ ನಡೆಸಿ ರೈತರಿಗೆ ಭೂಮಿ ಹಿಂದಿರುಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದರು.
ಇನ್ನು ಕರ್ನಾಟಕದ ಆನೇಕಲ್ ತಾಲೂಕಿನ 11 ಗ್ರಾಮದ 2,535 ಎಕರೆ ಭೂಮಿಯನ್ನು ಸರ್ಕಾರ ಕಾನೂನಿನ ವಿರುದ್ಧವಾಗಿ ಕಸಿದುಕೊಳ್ಳಲು ಹೊರಟಿರುವುದರ ವಿರುದ್ಧ ನಮ್ಮ ಸಂಘಟನೆಯ ನೇತೃತ್ವದಲ್ಲಿ 73 ದಿನದಿಂದ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸಂಘಟನೆಯಿಂದ ಕಾನೂನು ಹೋರಾಟವನ್ನೂ ನಡೆಸಿದ್ದೇವೆ. ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ದೆಹಲಿಯಲ್ಲಿ ರೈತ ಹೋರಾಟದ ಸಂದರ್ಭದಲ್ಲಿ ಹಸಿರು ಟವಲ್ ಅನ್ನು ರಾಜಕಾರಣಿಗಳು ಬಳಸಿ, ಅದಕ್ಕೆ ರಾಜಕೀಯದ ಸ್ವರೂಪ ನೀಡಿದ್ದಾರೆ. ಆದ್ದರಿಂದ ದೇಶಾದ್ಯಂತ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಹಸಿರು ಟವಲ್ ಹಾಕದಂತೆ ರಾಷ್ಟ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇಲ್ಲಿನ ಹೋರಾಟಗಾರರು ಕಾಲಾವಕಾಶ ಕೇಳಿದ ಹಿನ್ನಲೆ ಇನ್ನೂ ಹಸಿರು ಟವಲ್ ಧರಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಸರಬರಾಜು ಮಾಡುವ ರೈತರೊಂದಿಗೆ ಸಂವಾದ ನಡೆಸಲಾಗುವುದು. ಅಂತೆಯೇ ಇಲ್ಲಿನ ಸಮಸ್ಯೆಗಳನ್ನು ಅರಿತು ಹೋರಾಟ ರೂಪಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬಂತೆ ದೇಶದ ಅಸ್ತಿತ್ವವನ್ನು ಪ್ರಶ್ನಿಸಲು ಮುಂದಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿರೋಧದ ಹೆಜ್ಜೆಯಿಟ್ಟಿರುವುದು ಸ್ವಾಗತಾರ್ಹ. ನಮ್ಮ ದೇಶ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತದೆ. ಇದೀಗ ಅಮೆರಿಕಾ ಅಧ್ಯಕ್ಷನಿಗೆ ಮನಪರಿವರ್ತನೆಯಾದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.
ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್‌ರಾಜು, ಪ್ರಧಾನ ಕಾರ್ಯದರ್ಶಿ ಪಿ.ಎಲ್.ಸೋಮಶೇಖರ್, ರಾಜ್ಯ ಕಾರ್ಯಕಾರಣಿ ಸದಸ್ಯ ಸಿ.ವೆಂಕಟೇಶ್, ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ, ಕಾರ್ಯಕಾರಣಿ ಸದಸ್ಯ ದುರ್ಗೇಶ್ ಹಾಜರಿದ್ದರು.