

ಮಂಡ್ಯ: ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ಅನಿಯಂತ್ರಿತ ಮೈಕ್ರೋ ಫೈನಾನ್ಸ್‌ಗಳ ದೌರ್ಜನ್ಯದಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಸಾಲ ನೀಡಿಕೆ ಆದ್ಯತಾ ವಲಯದ ವ್ಯಾಪ್ತಿಯಿಂದ ಬ್ಯಾಂಕೇತರ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ತೆಗೆದು ಹಾಕಬೇಕು. ತಳಮಟ್ಟದಿಂದ ಸಾಲ ಕೊಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಅವು ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಕೊಟ್ಟು ಮಹಿಳೆಯರನ್ನು ಮತ್ತು ಅವರ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡಿರುವುದಲ್ಲದೆ, ದೌರ್ಜನ್ಯವೆಸಗುತ್ತಿವೆ ಎಂದು ದೂರಿದರು.
ಖಾಸಗಿ ಸಾಲದಾತರು ವಿಧಿಸುವ ಬಡ್ಡಿ ದರವನ್ನು ಮಿತಿಗೊಳಿಸಬೇಕು. ಸಾರ್ವಜನಿಕ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳು ಆದ್ಯತಾ ವಲಯದ ಸಾಲ ನೀಡಿಕೆಯನ್ನು ಹೆಚ್ಚಿಸುವಂತೆ ಮತ್ತು ಬಡ್ಡಿ ದರವನ್ನು ಮಿತಿಯಲ್ಲಿ ಇರಿಸುವಂತೆ ಆದೇಶ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ನಿರುದ್ಯೋಗದ ಹಿನ್ನೆಲೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಮೈಕ್ರೋ ಫೈನಾನ್ಸ್‌ಗಳು ಮತ್ತು ಕಿರು ಬ್ಯಾಂಕ್‌ಗಳಿಂದ ಪಡೆದುಕೊಂಡಿರುವ ಸಾಲದ ಮೇಲಿನ ಬಡ್ಡಿಯನ್ನು ಪೂರ್ತಿಯಾಗಿ ಮನ್ನಾ ಮಾಡಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿತ ಬ್ಯಾಂಕಿಂಗ್ ವಲಯದ ವ್ಯಾಪ್ತಿಗೆ ತರಬೇಕು. ಆದ್ಯತಾ ವಲಯದ ಎಲ್ಲ ವಿಭಾಗಗಳಲ್ಲೂ ಶೇ.30ರಷ್ಟು ಸಾಲವನ್ನು ಮಹಿಳೆಯರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಖಜಾಂಚಿ ರಾಣಿ, ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಎಂ.ಕೆ.ಪ್ರಭಾ, ಜಯಲಕ್ಷ್ಮಮ್ಮ ಇತರರಿದ್ದರು.