

ಮಂಡ್ಯ: ಧರ್ಮಸ್ಥಳದಲ್ಲಿ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ದಳ ರಚಿಸುವಂತೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್‌ಎಂವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತೆಯರು ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ತೆರಳಿ ಮನವಿ ಸಲ್ಲಿಸಿದರು. ಅಂತೆಯೇ ಸೌಜನ್ಯ ಪ್ರಕರಣ ಕುರಿತು ಮರುತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿರುವ ಗೃಹ ಸಚಿವ ಪರಮೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
2012ರಲ್ಲಿ ವಿದ್ಯಾರ್ಥಿನಿ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಯಿತು. ತನಿಖೆ ನಡೆದು ಅಮಾಯಕ ಸಂತೋಷ್‌ರಾವ್‌ನನ್ನು ಆರೋಪಿ ಎಂದು ಬಿಂಬಿಸಿದವು. ಆದರೆ ಸಿಬಿಐ ನ್ಯಾಯಾಲಯ ಆತನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ನಿಜವಾದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ಕೂಡ ವಿಫಲವಾಗಿದೆ. ಧರ್ಮಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ 2001 ರಿಂದ 2011ರವರೆಗೆ ಪೊಲೀಸ್ ಇಲಾಖೆಯ ಮಾಹಿತಿಯಂತೆ 452 ಅಸಹಜ ಸಾವು ಪ್ರಕರಣ ನಡೆದಿದೆ. ಇಷ್ಟೊಂದು ಅಸಹಜ ಸಾವು ಸಂಭವಿಸಿದರೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದು ದೊಡ್ಡ ಪ್ರಮಾದವಾಗಿದೆ ಎಂದು ಆರೋಪಿಸಿದರು.
ಸೌಜನ್ಯ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ಸರ್ಕಾರಿ ಅಭಿಯೋಜಕರ ಒಳಗೊಂಡ ವಿಶೇಷ ತನಿಖಾ ದಳ ರಚಿಸಬೇಕು. ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ದಿಷ್ಟ ಕಾಲಮಿತಿಯೊಳಗೆ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕು. ಗೃಹ ಇಲಾಖೆ ನಿಗದಿಪಡಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಿ ತನಿಖೆ ನಡೆಸಬೇಕು. ನ್ಯಾಯಾಧೀಶ ವರ್ಮಾ ಆಯೋಗದ ಶಿಫಾರಸು ಜಾರಿ ಮಾಡಬೇಕು. 1987ರಲ್ಲಿ ಪದ್ಮಲತಾ ಮತ್ತು ಆನೆ ಮಾವುತ ನಾರಾಯಣ ಹಾಗೂ ಆತನ ತಂಗಿ ಯಮುನಾ ಜೋಡಿ ಕೊಲೆ ಪ್ರಕರಣ ಸೇರಿದಂತೆ ಇಲ್ಲಿವರೆಗೆ ನಡೆದಿರುವ ಎಲ್ಲ ಅಸಹಜ ಸಾವು, ಕೊಲೆ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಸುಶೀಲಾ, ಶೋಭಾ, ಮಂಜುಳಾ, ರಾಣಿ, ಪ್ರೇಮಮ್ಮ, ಸುವರ್ಣ, ಪ್ರೇಮಾ ಇತರರಿದ್ದರು.