ಕಬಡ್ಡಿ ಪಂದ್ಯದಲ್ಲಿ ಮಂಗಳೂರು ವಿವಿ ಚಾಂಪಿಯನ್​

udp-26-ppc 1
Published on

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಪೂರ್ಣಪ್ರಜ್ಞ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖಿಲ ಭಾರತ ಅಂತರ್​ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಚಾಂಪಿಯನ್​ ಶಿಪ್​ ಮುಡಿಗೇರಿಸಿಕೊಂಡಿದೆ.

ಭಾನುವಾರ ಮಧ್ಯಾಹ್ನ ನಡೆದ ಅಂತಿಮ ಪಂದ್ಯದಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಚೆನ್ನೈ ನ ವೆಲ್ಸ್​ ವಿವಿ ತಂಡವನ್ನು 47/-15 ಅಂಕಗಳ ಅಂತರದಿಂದ ಸೋಲಿಸಿತು. ಈ ಹಿಂದೆ ಎರಡು ಬಾರಿ ರಾಷ್ಟ್ರೀಯ ಫೈನಲ್​ನಲ್ಲಿ ರನ್ನರ್​ ಅಪ್​ ಆಗಿದ್ದ ಮಂಗಳೂರು ವಿವಿ 33 ವರ್ಷದ ಬಳಿಕ ಪ್ರಥಮ ಸ್ಥಾನ ಗಳಿಸಿತು. ದಕ್ಷಿಣ ವಲಯ ಚಾಂಪಿಯನ್​ ಚೆನ್ನೈನ ವೆಲ್ಸ್​ ಇನ್​ ಸ್ಟಿಟ್ಯೂಟ್​ ಆಫ್​ ಸಾಯನ್ಸ್​ ರಾಷ್ಟ್ರೀಯ ವಿವಿ ರನ್ನರ್​ ಅಪ್​ ಸ್ಥಾನ ಪಡೆದಿದೆ. ಕಳೆದ ವರ್ಷ ಚಾಂಪಿಯನ್​ ಶಿಪ್​ ಪಡೆದಿದ್ದ ಹರ್ಯಾಣ ರೋಹ್ಟಕ್​ನ ಮಹರ್ಷಿ ದಯಾನಂದ ವಿವಿ ಹಾಗೂ ಹರಿಯಾಣದ ಚೌಧರಿ ಬನ್ಸಿಲಾಲ್​ ವಿವಿ 3ನೇ ಸ್ಥಾನವನ್ನು ಸಮಾನವಾಗಿ ಹಂಚಿಕೊಂಡಿವೆ.

ವೆಲ್ಸ್​ ವಿವಿಯ ಬಾಬು ಉತ್ತಮ ಆಲ್​ ರೌಂಡರ್​, ಮಂಗಳೂರು ವಿವಿಯ ರತನ್​ ಉತ್ತಮ ರೈಡರ್​ ಮತ್ತು ವಿನೋದ್​ ಉತ್ತಮ ಡಿೆಂಡರ್​ ಆಗಿ ಮೂಡಿಬಂದಿದ್ದಾರೆ.

ಬಹುಮಾನ ವಿತರಣೆ
ಪಂದ್ಯಾಟ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಿದರು. ವಿಧಾನ ಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪೂರ್ಣಪ್ರಜ್ಞ ಪಿಯು ಕಾಲೇಜಿನ ಕಾರ್ಯದರ್ಶಿ ಶಶಿಕಿರಣ್​ ಉಮಾಕಾಂತ್​, ಅಮೆಚ್ಯೂರ್​ ಕಬಡ್ಡಿ ಅಸೋಸಿಯೇಶನ್​ ಜಿಲ್ಲಾಧ್ಯಕ್ಷ ದಿನೇಶ್​ ಪುತ್ರನ್​, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್., ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಜೆರಾಲ್ಡ್​ ಸಂತೋಷ್​ ಡಿಸೋಜ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಕುಮಾರ್​, ವಿಶೇಷ ವೀಕ್ಷಕ ಡಾ.ಸುನೀಲ್​ ಕುಮಾರ್​, ಅದಮಾರು ಮಠ ಮ್ಯಾನೇಜರ್​ ಗೋವಿಂದರಾಜ್​ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕಾಲೇಜು ಆಡಳಿತಾಧಿಕಾರಿ ಡಾ.ಎ.ಪಿ. ಭಟ್​ ಅಧ್ಯಕ್ಷತೆ ವಹಿಸಿದ್ದರು.

ಪ್ರಜ್ಞಾ ಗೌರವ ಪ್ರದಾನ
ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಾಗೂ ಹಾಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಟೇಬಲ್​ ಟೆನ್ನಿಸ್​ ಆಟಗಾರ ಯಜ್ಞೇಶ್​, ಕರಾಟೆಪಟು ಅಂಕಿತಾ ಬಿ.ಟಿ., ಬ್ಯಾಡ್ಮಿಂಟನ್​ ಆಟಗಾರ ವಿಘ್ನೇಶ್​, ಹ್ಯಾಂಡ್​ ಬಾಲ್​ ಆಟಗಾರ್ತಿ ಶ್ರಾವ್ಯಾ ಗುರುರಾಜ್​, ಸೂರಜ್​ ಪೂಜಾರಿ, ಪೃಥ್ವಿ, ಅಣ್ಣಪ್ಪ, ಸೋಮಪ್ಪ, ಭೂಮಿಕಾ ಪೂಜಾರಿ, ಹರೀಶ್​, ಪವನ್​ ಸಾಮಗ, ಖುಷಿ ಅವರನ್ನು ಸ್ವಾಮೀಜಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net