

ಮೈಸೂರು: 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮೈಸೂರು ವಿವಿ ವಿದ್ಯಾರ್ಥಿನಿ ಅಂಬಿಕಾ ಬೆಳ್ಳಿ ಪದಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂತೆಯೆ, ಮುಂದೆ ಚೈನಾದಲ್ಲಿ ನಡೆಯಲಿರುವ ವಿಶ್ವ ಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಮಾನಸಗಂಗೋತ್ರಿಯ ವಿದ್ಯಾರ್ಥಿಯಾದ ಅಂಬಿಕಾ ಇತ್ತೀಚೆಗೆ ಭುವನೇಶ್ವರದ ಕೆಐಐಟಿ ವಿವಿಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್‌ಫುಟ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
14.51 ಮೀಟರ್ ದೂರ ಶಾಟ್‌ಫುಟ್ ಎಸೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಂಬಿಕಾ ಅವರನ್ನು ಕುಲಪತಿ ಪ್ರೊ. ಹೇಮಂತ್‌ಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ವ್ಯವಸ್ಥಾಪಕ ಭಾಸ್ಕರ್, ತರಬೇತುದಾರ ಎಂ.ಪುನೀತ್ ಸನ್ಮಾನಿಸಿದ್ದಾರೆ.