ಆಯಿಷ್ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ : ಕೆ.ಎಸ್.ಲತಾ ಕುಮಾರಿ

aiish
Published on

ಮೈಸೂರು: ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಆಯಿಷ್ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ನಿರ್ದೇಶಕಿ ಕೆ.ಎಸ್.ಲತಾ ಕುಮಾರಿ ಹೇಳಿದರು.


ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ (ಆಯಿಷ್) ಮೂರು ದಿನಗಳ ಐಎಎಲ್‌ಪಿ- ಆಡಿಯೊಲಜಿ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಐದು ದಶಕಗಳಲ್ಲಿ ದೇಶಕ್ಕೆ ನುರಿತ ತಜ್ಞರು ಹಾಗೂ ವೈದ್ಯರನ್ನು ನೀಡಿದೆ. ಅಂಗವಿಕಲರಿಗೆ ಪ್ರಮಾಣ ಪತ್ರ ನೀಡುವಲ್ಲಿ ಹಾಗೂ ಯೋಜನೆಗಳನ್ನು ರೂಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನೆರವಾಗಿದೆ ಎಂದು ಶ್ಲಾಘಿಸಿದರು.
ವಾಕ್ ಮತ್ತು ಶ್ರವಣ ದೋಷವುಳ್ಳ 4 ವರ್ಷದೊಳಗಿನ ಮಕ್ಕಳಿಗೆ ವಿಶೇಷ ಚಿಕಿತ್ಸೆ ತರಬೇತಿ ನೀಡಲು 8 ಜಿಲ್ಲೆಗಳಲ್ಲಿ ಶೀಘ್ರ ಮಧ್ಯಸ್ಥಿಕೆ ಕೇಂದ್ರ (ಅರ್ಲಿ ಇಂಟರ್ವೆನ್ಶನ್ ಸೆಂಟರ್) ಆರಂಭಿಸಿದ್ದು, ಅವುಗಳಲ್ಲಿ 4 ಕಾರ್ಯಾರಂಭ ಮಾಡಿವೆ. ರಾಜ್ಯದಲ್ಲಿ 13.27 ಲಕ್ಷ ಅಂಗವಿಕಲರಿದ್ದು, ಅವರಲ್ಲಿ 2.35 ಲಕ್ಷ ಮಂದಿ ಶ್ರವಣ ದೋಷ ಸಮಸ್ಯೆ ಎದುರಿಸುತ್ತಿದ್ದಾರೆ. ಆರಂಭದಲ್ಲೇ ಸಮಸ್ಯೆ ಗುರುತಿಸದಿದ್ದರೆ ಭಾಷಾ ಹಾಗೂ ಸಂವಹನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿಯೇ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.


ಗ್ರಾಮೀಣ ಪ್ರದೇಶದಲ್ಲಿಯೇ ಅಂಗವಿಕಲರು ಹೆಚ್ಚಿದ್ದು, ಸಾಮಾಜಿಕ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಅವರ ಅಭಿವೃದ್ಧಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಂಗವಿಕಲರಿಗೆ ಪ್ರಮಾಣ ಪತ್ರಗಳನ್ನು ನೀಡಲು ಹಾಗೂ ಯೋಜನೆಗಳು ತಲುಪಲು ಯುಡಿಐಡಿ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 4.85 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದರು.
ಐಎಎಲ್‌ಪಿಯ ಆಡಿಯಾಲಜಿ ಸಮಿತಿ ಮುಖ್ಯಸ್ಥ ಪ್ರೊ.ಆರ್.ರಂಗಸಾಯಿ, ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net