ಅಖಿಲ ಭಾರತ ಮುಕ್ತ ಫಿಡೆ ಚೆಸ್ ಪಂದ್ಯಾವಳಿ 22, 23ರಂದು

chess
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿ ಜೂ. 22 ಹಾಗೂ 23ರಂದು ಅಖಿಲ ಭಾರತ ಮುಕ್ತ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ.

ಗ್ರ್ಯಾಂಡ್​ವಾಸ್ಟರ್ ತೇಜಕುಮಾರ್ ಎಂ.ಎಸ್., ಇಂಟರ್​ನ್ಯಾಷನಲ್ ಮಾಸ್ಟರ್​ಗಳಾದ ಅಗ್ರಶ್ರೇಯಾಂಕಿತ ಶ್ಯಾಮ್ ನಿಕಿಲ್, ಸಮ್ಮೇದ ಜಯಕುಮಾರ್, ಗಿರಿನಾಥ ಪಿ.ಡಿ.ಎಸ್., ಚಕ್ರವರ್ತಿ ರೆಡ್ಡಿ, ಫಿಡೆ ಮಾಸ್ಟಲ್ ನಿಖಿಲ್ ದೀಕ್ಷಿತ ಸೇರಿ 11 ರಾಜ್ಯಗಳ 385 ಆಟಗಾರರು ಪಾಲ್ಗೊಳ್ಳುವರು. 9 ಸುತ್ತುಗಳಲ್ಲಿ ಪಂದ್ಯಾವಳಿ ನಡೆಯಲಿದೆ.

ಪ್ರಥಮ ಬಹುಮಾನ 35 ಸಾವಿರ ರೂ. ನಗದು ಮತ್ತು ಕೆಎಲ್​ಇ ಟೆಕ್ ಟ್ರೋಫಿ, ದ್ವಿತೀಯ ಬಹುಮಾನ 25 ಸಾವಿರ ರೂ., ತೃತೀಯ ಬಹುಮಾನ 20 ಸಾವಿರ ರೂ. ಸೇರಿ ಒಟ್ಟು 2 ಲಕ್ಷ ರೂ. ಬಹುಮಾನ ಮೊತ್ತ ಹಾಗೂ 75 ಟ್ರೋಫಿಗಳು ಒಳಗೊಂಡಿವೆ.

ಜೂ. 22ರಂದು ಬೆಳಗ್ಗೆ 9.30ಕ್ಕೆ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಉದ್ಘಾಟಿಸುವರು. ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ್, ರೋಟರಿ ಡಿಸ್ಟ್ರಿಕ್ಟ್ ಮಾಜಿ ಗವರ್ನರ್ ಆನಂದ ಕುಲಕರ್ಣಿ ಪಾಲ್ಗೊಳ್ಳುವರು. ಮಂಜುನಾಥ ಮೂರ್ತಿ ಪಂದ್ಯಾವಳಿಯ ಮುಖ್ಯ ತೀರ್ಪಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

23ರಂದು ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದ್ದು, ಶಾಸಕ ಮಹೇಶ ಟೆಂಗಿನಕಾಯಿ, ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ನಾಸಿರ್ ಬೊರಸಡವಾಲಾ, ಕೆಎಲ್​ಇ ತಾಂತ್ರಿಕ ವಿವಿ ಡಾ. ಬಸವರಾಜ ಅನಾಮಿ ಪಾಲ್ಗೊಳ್ಳುವರು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ, ರೋಟರಿಇ ಕ್ಲಬ್ ಆಫ್ ಹುಬ್ಬಳ್ಳಿ ಉತ್ತರ ಹಾಗೂ ಧಾರವಾಡ ಜಿಲ್ಲಾ ಚೆಸ್ ಸಂಸ್ಥೆ ಜಂಟಿಯಾಗಿ ಪಂದ್ಯಾವಳಿ ಆಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net