

ವಿಜಯಪುರ: ಪ್ರತಿ ವರ್ಷ ದೇಶಾದ್ಯಂತ ನವದೆಹಲಿಯ ರಾಷ್ಟ್ರೀಯ ಸಹಕಾರ ಯುನಿಯನ್ ಮಾರ್ಗದರ್ಶನದಲ್ಲಿ ನ. 14 ರಿಂದ ನ. 20 ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಡಾ. ಸದಾಶಿವ ಪವಾರ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯ ಜಿಲ್ಲಾ ಸಹಕಾರಿ ಯುನಿಯನ್‌ನಲ್ಲಿ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸೈಟಿ, ಸ್ಥಳೀಯ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 71 ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿ, ದೇಶದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವಾಗಿದ್ದು ಅವರು ಸಹಕಾರ ಚಳವಳಿ ಬೆಳವಣಿಗೆ ನೀಡಿದ ಪ್ರೋತ್ಸಾಹಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿಯ ಸಪ್ತಾಹದ ಧ್ಯೇಯ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬುದಾಗಿದೆ. 2025 ರ ವೇಳೆಗೆ ರಾಷ್ಟ್ರ 5 ಟ್ರಿಲಿಯನ್ ಮತ್ತು 2047ರ ಸ್ವಾತಂತ್ರೃ ಶತಮಾನೋತ್ಸವದ ವೇಳೆಗೆ 30 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆ ಹೊಂದಬೇಕು ಎಂಬ ಮಹತ್ತರವಾದ ಆಕಾಂಕ್ಷೆ ಕೇಂದ್ರ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಯುನಿಯನ್ ಉಪಾಧ್ಯಕ್ಷ ಎಸ್.ಎಸ್. ತಳೇವಾಡ ಅಧ್ಯಕ್ಷತೆ ವಹಿಸಿದ್ದರು. ಶಿವಾಜಿ ಮಹಾರಾಜ ಸೊಸೈಟಿಯ 2023-24ನೇ ಸಾಲಿನ ನಿವ್ವಳ ಲಾಭದಿಂದ ತೆಗೆದಿರಿಸಿದ್ದ ಸಹಕಾರ ಶಿಕ್ಷಣ ನಿಧಿಗೆ 1,55,430 ರೂ. ಗಳ ಚೆಕ್ಕನ್ನು ಜಿಲ್ಲಾ ಸಹಕಾರಿ ಯುನಿಯನ್ ಮೂಲಕ ಬೆಂಗಳೂರಿನ ರಾಜ್ಯ ಸಹಕಾರ ಮಹಾಮಂಡಳಕ್ಕೆ ನೀಡಲಾಯಿತು.
ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎ.ಎಸ್. ಚಂದಾವಾಲೆ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಕೆ.ಬಿ. ಪಾಟೀಲ, ಎಂ.ಸಿ. ಮುಲ್ಲಾ, ಆರ್.ಎಂ. ತೋಟದ, ಸಹಕಾರ ಸಂಘಗಳ ಉಪನಿಬಂಧಕರಾದ ಎಸ್.ಕೆ. ಭಾಗ್ಯಶ್ರೀ, ಎಸ್.ಡಿ. ಮನಗೂಳಿ, ಸಂಘದ ಉಪಾಧ್ಯಕ್ಷ ಶಂಕರ ಕನಸೆ, ನಿರ್ದೇಶಕರಾದ ಸಂಜಯ ಜಂಬೂರೆ, ಮಹಾದೇವ ಪವಾರ, ಸರೋಜನಿ ನಿಕ್ಕಂ, ಅಂಬುತಾಯಿ ಜಾಧವ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ಸಹಾಯಕ ವ್ಯವಸ್ಥಾಪಕ ಅಂಬಾದಾಸ ಚವ್ಹಾಣ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಎಂಜಿ ರಸ್ತೆಯ ಲಕ್ಷ್ಮೀ ದೇವಸ್ಥಾನದ ಮುಂಭಾಗದ ಶಿವಾಜಿ ಮಹಾರಾಜ ಸಂಘದ ಕಚೇರಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಿನ್ನೆಲೆ ಸಂಘದ ಅಧ್ಯಕ್ಷ ಡಾ. ಸದಾಶಿವ ಪವಾರ ಸಪ್ತವರ್ಣದ ಸಹಕಾರಿ ಧ್ವಜಾರೋಹಣ ನೆರವೇರಿಸಿದರು.