

ಮಂಡ್ಯ: ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಿಂಸೆಯ ವಿರುದ್ಧ ಕ್ರಮ ಕೈಗೊಂಡು ಅವರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಂತೆ ಅಖಿಲ ಭಾರತ ಕ್ರೈಸ್ತ ಮಹಾಸಭಾ ಅಧ್ಯಕ್ಷ ಹೊಯ್ಸಳರಾಜ್ ಒತ್ತಾಯಿಸಿದರು.
ಮಣಿಪುರದಲ್ಲಿ ಶೇ.41.29ರಷ್ಟು ಕ್ರಿಶ್ಚಿಯನ್ನರು ಶಾಂತಿಯುತವಾಗಿ ವಾಸಿಸುವ ರಾಜ್ಯ. ಅಲ್ಲಿನ ಬಹುತೇಕ ಕ್ರೈಸ್ತರ ಶಾಲೆ, ಆಸ್ಪತ್ರೆ, ಅನಾಥಾಶ್ರಮಗಳನ್ನು ನಡೆಸಿಕೊಂಡು ದೇಶ ಸೇವೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಅಲ್ಲಿ ಗಲಭೆಗಳು ಏರ್ಪಟ್ಟು ಕ್ರಿಶ್ಚಿಯನ್ನರು ಮತ್ತು ಚರ್ಚ್‌ಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಕ್ರಿಶ್ಚಿಯನ್ನರ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗುತ್ತಿದೆ. ನೂರಾರು ಜನರನ್ನು ಹತ್ಯೆ ಮಾಡಲಾಗಿದೆ. ಹಲವರು ಗಾಯಗೊಂಡಿದ್ದಾರೆ. ಮಕ್ಕಳು ಅನಾಥರಾಗುತ್ತಿದ್ದಾರೆ. ರಸ್ತೆಯಲ್ಲೇ ಮಹಿಳೆಯರಿಗೆ ಬೆತ್ತಲೆ ಮೆರವಣಿಗೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದೆ. ಅನೇಕ ಚರ್ಚ್‌ಗಳನ್ನು ಸುಡಲಾಗುತ್ತಿದ್ದು, ಇದನ್ನು ತಡೆಯಲು ಅಲ್ಲಿನ ಸರ್ಕಾರ ವಿಫಲವಾಗಿದೆ. ತಕ್ಷಣ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತರಬೇಕು. ಕ್ರಿಶ್ಚಿಯನ್ನರು ಮತ್ತು ಮಣಿಪುರ ನಾಗರಿಕರನ್ನು ರಕ್ಷಿಸಬೇಕು. ಉಡುಪಿಯ ನರ್ಸಿಂಗ್ ಕಾಲೇಜಿನಲ್ಲಿ ಶೌಚಗೃಹದಲ್ಲಿ ಹಿಂದು ಹೆಣ್ಣು ಮಕ್ಕಳು ವೀಡಿಯೋ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆಯನ್ನು ನಮ್ಮ ಮಹಾಸಭಾ ಕೂಡ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಮಹಾಸಭಾದ ಪದಾಧಿಕಾರಿಗಳಾದ ಸುಧಾಕರ್, ದೀಪು, ಡೇವಿಡ್, ಸಾಲುಮನ್, ವಿಜಯಕುಮಾರ್, ಸುದರ್ಶನ್ ಇತರರಿದ್ದರು.