

ಮಂಗಳೂರು: ಗೃಹರಕ್ಷಕರು ಸಾರ್ವಜನಿಕರ ಜತೆ ಉತ್ತಮ ಸಂಬಂಧ ಹೊಂದಿರಬೇಕು. ಸಮವಸ್ತ್ರದಲ್ಲಿರುವಾಗ ಶಿಸ್ತಿನಿಂದ ವರ್ತಿಸುವುದು, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುವುದು ಅವಶ್ಯ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಮೇರಿಹಿಲ್‌ನಲ್ಲಿರುವ ಗೃಹರಕ್ಷಕದಳದ ಕಚೇರಿಯಲ್ಲಿ ಶುಕ್ರವಾರ ನಡೆದ ಅ.ಭಾ. ಗೃಹರಕ್ಷಕದಳ ಉತ್ಥಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅತಿಥಿ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಫೋರೆನ್ಸಿಕ್ ವಿಭಾಗ ಮುಖ್ಯಸ್ಥ ಡಾ.ಮಹಾಬಲೇಶ್ ಶೆಟ್ಟಿ ಮಾತನಾಡಿ,ಗೃಹರಕ್ಷಕರ ಸೇವೆಯನ್ನು ಸಮಾಜ ಮತ್ತು ಸರ್ಕಾರ ಗುರುತಿಸಬೇಕು ಎಂದರು.
ಇನ್ನೋರ್ವ ಅತಿಥಿ ಎ.ಜೆ. ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಕಿಶನ್ ರಾವ್ ಬಾಳಿಲ ಮಾತನಾಡಿ, ಗೃಹರಕ್ಷಕರು ಸಮಾಜಸೇವೆ ಮಾಡುವುದರೊಂದಿಗೆ ಸಾರ್ವಜನಿಕರ ಜೀವರಕ್ಷಣೆ ಮಾಡಲು ತರಬೇತಿ ಪಡೆದಿದ್ದು, ವೈದ್ಯರು ಚಿಕಿತ್ಸೆ ನೀಡುವ ಮೊದಲು ಜೀವ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ. ಮುರಲೀ ಮೋಹನ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಸೇವಾ ಮನೋಭಾವವುಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕ ದಳಕ್ಕೆ ಸೇರಿ ದೇಶ ಸೇವೆಯಲ್ಲಿ ಭಾಗಿಯಾಗಬೇಕೆಂದರು.
ಬೆಳ್ತಂಗಡಿ ಘಟಕದ ಡೆನ್ನಿಸ್ ಡಿಸೋಜ, ಉಪ್ಪಿನಂಗಡಿ ಘಟಕದ ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಬಂಟ್ವಾಳ ಘಟಕದ ವಿಜಯ ಕುಮಾರ್ ಮತ್ತು ಬೆಳ್ಳಾರೆ ಘಟಕದ ಪ್ರಭಾಕರ್ ನಾಯಕ್ ಇವರುಗಳನ್ನು ಸನ್ಮಾನಿಸಲಾಯಿತು.
ಗೃಹರಕ್ಷಕ ದಳದ ಕಛೇರಿ ಅಧೀಕ್ಷಕ ಗೋಪಿನಾಥ್ ಬಿ.ಎನ್. ಸ್ವಾಗತಿಸಿದರು. ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ ಗೃಹರಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ವಂದಿಸಿದರು. ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ಕಾರ್ಯಕ್ರಮ ನಿರೂಪಿಸಿದರು.