

ಸಿಂಧನೂರು: ಯುಜಿಸಿ ಮತ್ತು ನಾನ್ ಯುಜಿಸಿಯೆಂದು ಗೊಂದಲ ಸೃಷ್ಟಿಸದೆ ಎಲ್ಲ ಅತಿಥಿ ಉಪನ್ಯಾಸಕರನ್ನು ಆಯ್ಕೆಗೆ ಪರಿಗಣಿಸದಿದ್ದರೆ ಜು. 10ರ ನಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ್ ಗೋನಾಳ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಬೇರ‌್ಗಿ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಅವರು, ಕಾಲೇಜು ಶಿಕ್ಷಣ ಇಲಾಖೆ ಜೂ.25 ರಂದು 2025-26 ನೇ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಕೇವಲ ಯುಜಿಸಿ ಅರ್ಹತೆ ಅಂದರೆ ನೆಟ್, ಸೆಟ್, ಪಿಎಚ್.ಡಿ ಹೊಂದಿರುವವರನ್ನು ಮಾತ್ರ ಪರಿಗಣಿಸುವಂತೆ ಸೂಚಿಸಲಾಗಿದೆ.
ಸುಮಾರು 15-20 ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿರುವ 11 ಸಾವಿರ ಕ್ಕೂ ಹೆಚ್ಚು ಉಪನ್ಯಾಸಕರ ಪೈಕಿ 5500ಕ್ಕೂ ಹೆಚ್ಚು ಉಪನ್ಯಾಸಕರು ಅರ್ಹತೆ ಹೊಂದಿಲ್ಲ ಎಂದು ಕೈ ಬಿಡುತ್ತಿರುವುದು ಖಂಡನೀಯ. ಕಾರಣ ಸರ್ಕಾರ ಅಧಿಸೂಚನೆ ಹಿಂಪಡೆದು ಎಲ್ಲ ಅತಿಥಿ ಉಪನ್ಯಾಸಕರನ್ನು ಆಯ್ಕೆಗೆ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.