

ಇಳಕಲ್ಲ(ಗ್ರಾ): ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಸರ್ಕಾರ ಏ.2 ರಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಸರ್ಕಾರಿ ಕಚೇರಿಗಳ ಕೆಲಸದ ವೇಳೆ ನಿಗದಿಗೊಳಿಸಿ ಆದೇಶ ಹೊರಡಿಸಿದ್ದರು, ಇಲ್ಲಿಯ ಕಚೇರಿಗಳಿಗೆ ಅದು ಅನ್ವಯವಾಗಿಲ್ಲ ಎನ್ನುವಂತಾಗಿದೆ.
ನಗರದಲ್ಲಿನ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಕಾರ್ಯಾಲಯ, ನಗರಸಭೆ, ನೀರಾವರಿ ಇಲಾಖೆ, ಕರ್ನಾಟಕ ಕೈಮಗ್ಗ ಸೇರಿ ಬಹುತೇಕ ಇಲಾಖೆಗಳು ಬಹುತೇಕ ಅಧಿಕಾರಿಗಳು ಬೆಳಗ್ಗೆ 10 ಗಂಟೆ ಸಮೀಪಿಸಿದರೂ ಕಚೇರಿ ಕಡೆಗೆ ಮುಖ ಮಾಡಿಲ್ಲ. ಮೇಲಾಧಿಕಾರಿಗಳೇ ಸರಿಯಾಗಿ ಬಾರದ್ದರಿಂದ ಕೆಳ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ಸಹ ಕಚೇರಿಗೆ ಚಕ್ಕರ್ ಹೊಡೆಯುತ್ತಿದ್ದಾರೆ.
ಬಹುತೇಕ ಸರ್ಕಾರಿ ಕಚೇರಿಗಳೆಲ್ಲ ಖಾಲಿ ಹೊಡೆಯುತ್ತಿವೆ. ಕಚೇರಿಗೆ ಬರುವುದು ತಡವಾಗಿ ಬಂದರು, ಹೋಗುವುದು ಮಾತ್ರ ಸರಿಯಾದ ಸಮಯಕ್ಕೆ ಹೋಗುತ್ತಾರೆ. ಕಚೇರಿಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದ ಆದೇಶವನ್ನು ಪಾಲಿಸುತ್ತಾರೆನೋ ಕಾದು ನೋಡಬೇಕಾಗಿದೆ.