

ಮುಂಡರಗಿ: ಸರ್ಕಾರದಿಂದ ಪಿತ್ರಾರ್ಜಿತ ಆಸ್ತಿ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ಪ್ರಕ್ರಿಯೆ ಸರಳಿಕೃತಗೊಳಿಸಲು ಕಂದಾಯ ಇಲಾಖೆಯಿಂದ ಇ-ಪೌತಿ ಆಂದೋಲನ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 70 ಸಾವಿರ ಪೌತಿ (ಮರಣ) ಖಾತೆ ಹೊಂದಿದ ಪ್ರಕರಣಗಳಿದ್ದು ಎಲ್ಲ ರೈತರು ಸರ್ಕಾರಿ ಸೌಲಭ್ಯ ಹೊಂದಬೇಕೆಂದರೆ ಇ-ಖಾತಾ ಹೊಂದಲು ತಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಗದಗ ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್. ಹೇಳಿದರು.
ತಾಲೂಕಿನ ವೆಂಕಟಾಪೂರ ಗ್ರಾಮದ ಅನ್ನದಾನೀಶ್ವರ ಮಠದ ಆವರಣದಲ್ಲಿ ಕಂದಾಯ ಇಲಾಖೆ ಮೂಲಕ ಇ-ಪೌತಿ ವಾರಸಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಗದಿದ್ದರೆ ಅಂತಹ ಜಮೀನು ಸ್ವಾಧೀನ ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು, ಬೆಳೆ ಸಾಲ, ಸಾಲ ಸೌಕರ್ಯ, ಕೃಷಿ, ತೋಟಗಾರಿಕೆ ಸೌಲಭ್ಯ ದೊರೆಯುವುದಿಲ್ಲ. ಬೆಳೆ ಹಾನಿ ಆದ ವೇಳೆ ಪರಿಹಾರ ಪಡೆಯಲು ದುಸ್ತರವಾಗುತ್ತದೆ. ಪರಿಹಾರ ಸಿಗುವುದಿಲ್ಲ. ಹೀಗಾಗಿ ಆಸ್ತಿ ಹಕ್ಕು ವರ್ಗಾವಣೆಗೆ ಇ-ಪೌತಿ ಆಂದೋಲನ ಆರಂಭಿಸಲಾಗಿದೆ ಎಂದು ತಿಳಿಸಿದರು.
ಇ-ಪೌತಿ ಖಾತಾಕ್ಕೆ ಬೇಕಾದ ವಂಶವೃಕ್ಷ ಮರಣ ಪ್ರಮಾಣದಂತಹ ಇತರ ದಾಖಲೆ ಸಿದ್ಧಪಡಿಸಿಕೊಂಡು ಆಂದೋಲನ ಯಶಸ್ವಿಗೆ ಜಿಲ್ಲೆಯ ರೈತರು ಸಹಕರಿಸಬೇಕು. ಈ ಕುರಿತಂತೆ ಮಾಹಿತಿಗೆ ಸಂಬಂಧಿಸಿದಂತೆ ತಹಸೀಲ್ದಾರ್, ಉಪತಹಸೀಲ್ದಾರ್, ಕಂದಾಯ ನಿರೀಕ್ಷಕರಿಗೆ, ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂರ್ಪಸಲು ಮುಂದಾಗಬೇಕು ಎಂದರು.
ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮಾತನಾಡಿ, ತಾಲೂಕಿನಲ್ಲಿ ಪೋತಿ ಇರುವ ಖಾತೆಗಳು 8,000 ಇದ್ದು. ವೆಂಕಟಾಪೂರ ಗ್ರಾಮದಲ್ಲಿ 180 ಪೋತಿ ಖಾತಾ ಇದ್ದು, ಈಗಾಗಲೆ 20 ಅರ್ಜಿಗಳು ಬಂದಿವೆ. ಅವರಿಗೆ ಶೀಘ್ರದಲ್ಲಿ ಇ ಖಾತಾ ಮಾಡಿಕೊಡಲಾಗುವುದು ಎಂದರು.
ಗದಗ ಚುನಾವಣಾ ತಹಸೀಲ್ದಾರ್ ಸಂತೋಷ ಹಿರೇಮಠ ಮಾತನಾಡಿದರು. ಕೆಲ ರೈತರು ತಮ್ಮ ಖಾತೆಯಲ್ಲಿ ತಂದೆ ಅಜ್ಜ ಮುತ್ತಜ್ಜ ಕಾಲದ ಖಾತೆಗೆ ಪರಿಹಾರದ ಕುರಿತು ಅಧಿಕಾರಿಗಳಿಗೆ ಪ್ರಶ್ನೆ ಕೇಳಿದರು. ಅದಕ್ಕೆ ಜಿಲ್ಲಾಧಿಕಾರಿ ಶ್ರೀಧರ ಪ್ರತಿಕ್ರಿಯಿಸಿ ಮಾಹಿತಿ ನೀಡಿದರು.
ಉಪತಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತಾಧಿಕಾರಿಗಳಾದ ಪರಶು ಗಾಡಿ, ಲಕ್ಷ್ಮಣ ಗುಡಿಸಲಮನಿ, ವಿನೋದ ಹೊಸಮಠ, ರೈತರಾದ ಚನ್ನಬಸಪ್ಪ ಹಳ್ಳಿ, ಕಲ್ಲೇಶ, ಸಂಗಪ್ಪ ಸಣ್ಣದ್ಯಾವಣ್ಣವರ, ಮಂಜುನಾಥ ಕಿನ್ನಾಳ, ಯಲ್ಲಪ ಸಣ್ಣದ್ಯಾವಣ್ಣವರ, ಮಲ್ಲಪ್ಪ ಹೊಸಮನಿ, ಬಸುರಾಜ ಕೊಪ್ಪಳ, ನಿಂಗಪ್ಪ ಹೊಸಮನಿ, ಶಂಕ್ರಪ್ಪ ಹೊಸಮನಿ, ಶುಭಾಸ ಚವಡಿ, ಮತ್ತಿತರರು ಇದ್ದರು.