

ಗುಂಡ್ಲುಪೇಟೆ : ಬಂಡೀಪುರದ ಎಲ್ಲ ಕಳ್ಳಬೇಟೆ ತಡೆ ಶಿಬಿರಗಳನ್ನು ನವೀಕರಣಗೊಳಿಸಿ ಸಿಬ್ಬಂದಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಹೇಳಿದರು.
ಶುಕ್ರವಾರ ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಪರಿಸರವಾದಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಫೋಟೋ ವಿಡಿಯೋ ಅಪ್ಲೊಡ್ ಮಾಡಿ ಕ್ಯಾಂಪ್‌ಗಳಲ್ಲಿ ಯಾವುದೇ ಸವಲತ್ತುಗಳಿಲ್ಲದೆ ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ಎಲ್ಲ ಕ್ಯಾಂಪ್‌ಗಳನ್ನು ನವೀಕರಿಸಿ, ಕೊಳವೆ ಬಾವಿ ಕೊರೆಸಿ ಕುಡಿಯುವ ನೀರು ಸೇರಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಸಿಬ್ಬಂದಿ ವಸತಿಗೃಹಗಳನ್ನು ರಿಪೇರಿ ಮಾಡಿಸಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿದರೂ ಒಪ್ಪದೆ ಬೆದರಿಕೆ ಹಾಕಿದ್ದಾರೆ. ಬಂಡೀಪುರದ ಹೆಸರಿಗೆ ಕಳಂಕ ತರಲು ಸಾಮಾಜಿಕ ಜಾಲತಾಣ ಬಳಸಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ಎಲ್ಲ ಕ್ಯಾಂಪ್‌ಗಳ ಇತ್ತೀಚಿನ ಫೋಟೋ ವಿಡಿಯೋ ಪ್ರದರ್ಶಿಸಿದರು. ಬಂಡೀಪುರ ಕಾಡಂಚಿನಲ್ಲಿ 123 ಗ್ರಾಮಗಳಿದ್ದು ಯಾವುದೇ ಜಮೀನಿಗೆ ಆನೆ ಬಂದರೂ ಸ್ವಲ್ಪಹೊತ್ತಿಗೆ ತಲುಪಿ ಅವುಗಳನ್ನು ಓಡಿಸಲಾಗುತ್ತಿದೆ. 70 ಕಿ.ಮೀ. ಮಾತ್ರ ರೈಲ್ವೆ ಕಂಬಿ ಅಳವಡಿಸಲಾಗಿದ್ದು ಇನ್ನೂ 200 ಕಿಲೋಮೀಟರ್ ಅಳವಡಿಸಬೇಕಾಗಿದೆ. ಸದ್ಯ 27 ಕಿ.ಮೀ. ಅನುಮತಿ ದೊರಕಿದ್ದು ಆನೆಗಳ ಹಾವಳಿ ಹೆಚ್ಚಾಗಿರುವ ನುಗು, ಮೊಳೆಯೂರು ಮತ್ತು ಗೋಪಾಲಸ್ವಾಮಿಬೆಟ್ಟ ವಲಯಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ವಾಹನಗಳ ಕೊರತೆಯಿದ್ದರೂ ಕರೆಬಂದ ಕೂಡಲೇ ಸ್ಥಳಕ್ಕೆ ತೆರಳುತ್ತಿದ್ದಾರೆ. ಮಾನವ ವನ್ಯಜೀವಿ ಸಂಘರ್ಷ ಹಾಗೂ ಮಾನವ ಸಾವು ತಡೆಗಟ್ಟಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಸರ್ಕಾರದಿಂದ 3 ಕೋಟಿ ರೂ. ಅನುದಾನ ಬಂದಿದ್ದು ಬಹುತೇಕ ಬೆಳೆನಷ್ಟ ಪರಿಹಾರದ ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಬಂಡೀಪುರ ಹುಲಿ ಸಂರಕ್ಷಣಾ ನಿಧಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದಿಂದ ಅನುದಾನ ಬರುವುದು ವಿಳಂಬವಾದರೂ ಈ ನಿಧಿಯಿಂದ ಪ್ರತಿ ತಿಂಗಳೂ 5ರ ವೇಳೆಗೆ ವೇತನ ನೀಡಲಾಗುತ್ತಿದೆ.
ಚೆಕ್‌ಪೋಸ್ಟ್‌ಗಳಿಗೆ ಆ್ಯಪ್ ಆಧರಿತ ಕ್ಯಾಮರಾಗಳನ್ನು ಅಳವಡಿಸಿ ವಾಹನಗಳ ಸಂಖ್ಯೆ ಹಾಗೂ ನಿಖರವಾದ ಚಲನವಲನಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಅರಣ್ಯ ಮಾರ್ಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ಗಿರಿಜನರ ಮಕ್ಕಳಿಗೆ ಸ್ಕಾಲರ್‌ಶಿಪ್, ಹಾಡಿಗಳಿಗೆ ಸೋಲಾರ್ ದೀಪ ಅಳವಡಿಕೆ, ಕರಕುಶಲ ಕೌಶಲ ವೃದ್ಧಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಾಂಪುರ ಶಿಬಿರದ ಆನೆಗಳನ್ನು ದಸರೆಗೆ ಆಯ್ಕೆ ಮಾಡುವ ತಂಡ ಒಮ್ಮೆ ಭೇಟಿ ನೀಡಿದ್ದು ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಡೀಪುರ ಉಪವಿಭಾಗದ ಎಸಿಎಫ್ ಎನ್.ಪಿ.ನವೀನ್ ಕುಮಾರ್, ವಲಯಾರಣ್ಯಾಧಿಕಾರಿಗಳಾದ ಎನ್.ಸಿ.ಮಹದೇವ, ಬಿ.ಎಂ.ಮಲ್ಲೇಶ್, ಇದ್ದರು.