

ಕೇಶವಮೂರ್ತಿ ವಿ.ಬಿ. ಹಾವೇರಿ
‘ಈ ಸಲ ಹೆಣ್ವುಕ್ಳು ಹೆಚ್ಚಾಗಿ ಓಟು ಕಾಂಗ್ರೆಸ್ಗೆ ಹಾಕ್ಯಾರ್ಪಾ, ಗ್ಯಾರಂಟಿ ಕೈ ಹಿಡದೈತಿ..’
‘ಎಂಪಿ ಎಲೆಕ್ಷನ್ದಾಗ ಅದೆಲ್ಲ ನಡಿಯಂಗಿಲ್ಲ ನೋಡು, ಕೇಂದ್ರದಾಗ ಮೋದಿನ ಬೇಕ್ ಅಂತಾರ, ಅದಕ ಹೆಣ್ವುಕ್ಳ ಓಟು ಬಿಜೆಪಿಗೆ ಹೆಚ್ಚು ಬಿದ್ದಾವ್ ನೋಡ್ಪಾ...’
ಹಾವೇರಿ-ಗದಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಮತದಾರರು, ವಿವಿಧ ಪಕ್ಷಗಳ ಕಾರ್ಯಕರ್ತರು, ಮುಖಂಡರು ಎದುರಾದಾಗ ಸಾಮಾನ್ಯವಾಗಿ ಚರ್ಚೆಯಾಗುತ್ತಿರುವ ವಿಷಯವಿದು. ಈ ಬಾರಿ ಕ್ಷೇತ್ರದಲ್ಲಿ ಮಹಿಳಾ ಮತದಾನ ಕಳೆದ ಬಾರಿಗಿಂತಲೂ ಶೇ. 6ರಷ್ಟು ಹೆಚ್ಚಾಗಿದ್ದು, ಮಹಿಳೆಯರ ಮತ ಕಾಂಗ್ರೆಸ್ಗೋ ಅಥವಾ ಬಿಜೆಪಿಗೋ ಎನ್ನುವ ಚರ್ಚೆ ಜೋರಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಮಹಿಳಾ ಮತದಾರರು ಯಾರ ಪರ ನಿಂತಿದ್ದಾರೆ ಎಂಬ ಚರ್ಚೆ ಮೊದಲಿನಿಂದ ಇತ್ತಾದರೂ, ಮತದಾನದ ನಂತರ ಎಲ್ಲರ ಚಿತ್ತ ಮಹಿಳಾ ಮತದಾರರತ್ತ ಕೇಂದ್ರೀಕೃತವಾಗಿದೆ. ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಪರ ಇದ್ದಾರೋ ಅಥವಾ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಪರ ಇದ್ದಾರೋ ಎಂಬುದು ಚರ್ಚೆಯ ಪ್ರಮುಖ ವಿಷಯವಾಗಿದೆ.
ಪ್ರತಿ ಸಲ ಜಾತಿ ಲೆಕ್ಕಾಚಾರವೇ ಚರ್ಚೆಯ ಪ್ರಮುಖ ವಿಷಯವಾಗುತ್ತಿತ್ತು. ಆದರೆ, ಈ ಬಾರಿ ವಿಶ್ಲೇಷಣೆಯನ್ನು ಮಹಿಳೆಯರು ಬದಲಿಸಿದ್ದಾರೆ!
ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಮೇಲೆ ಕಾಂಗ್ರೆಸ್ ಪಕ್ಷ ಈ ಬಾರಿ ಭಾರಿ ವಿಶ್ವಾಸ ಹೊಂದಿದೆ. ಸಾಂಪ್ರದಾಯಿಕ ವೋಟುಗಳ ಜತೆಗೆ ಗ್ಯಾರಂಟಿ ಕೃಪೆಯಿಂದ ಮಹಿಳಾ ಮತದಾರರ ಓಟುಗಳೂ ನಮಗೇ ಬರಲಿವೆ. ಹಾಗಾಗಿ, ಈ ಬಾರಿ ಗೆಲುವು ನಮ್ಮದೇ ಎಂದು ಕಾಂಗ್ರೆಸ್ ವಿಶ್ವಾಸ ಹೊಂದಿದೆ.
ಮಹಿಳಾ ಮತದಾರರು ಪ್ರಬುದ್ಧರು. ಎಲ್ಲಿ ಯಾವಾಗ ಯಾರಿಗೆ ಮತ ಹಾಕಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ದೇಶದ ವಿಷಯ ಬಂದಾಗ ಮೋದಿ ಅವರಿಗೇ ಮೊದಲ ಪ್ರಾಧಾನ್ಯತೆ ಕೊಡುತ್ತಾರೆ. ಆದ್ದರಿಂದ ಈ ಸಲವೂ ಕಮಲದ ಗೆಲುವು ನಿಕ್ಕಿ ಎಂಬುದು ಬಿಜೆಪಿಯವರು ವ್ಯಕ್ತಪಡಿಸುವ ವಿಶ್ವಾಸ.
ಮಹಿಳಾ ಮತದಾರರಲ್ಲಿ ನವ ಮತದಾರರು, ಯುವ ಮತದಾರರು, ಮಧ್ಯಮ ವಯಸ್ಕ, ಹಿರಿಯ ಮತದಾರರೂ ಸೇರಿದ್ದಾರೆ. ಒಂದೊಂದು ವರ್ಗದ ಮತಗಳು ಒಂದೊಂದು ಪಕ್ಷ, ಅಭ್ಯರ್ಥಿಯತ್ತ ಸೆಳೆಯಲ್ಪಟ್ಟಿರುತ್ತವೆ. ಈ ಬಾರಿ ಗೆಲುವಿನ ರೂವಾರಿಗಳು ಇವರೇ ಆಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಯರ್ಯಾರ ತರ್ಕ ಸರಿ ಎನ್ನುವುದು ತಿಳಿಯಲು ಜೂನ್ 4ರ ಫಲಿತಾಂಶ ಪ್ರಕಟವಾಗುವವರೆಗೆ ಕಾಯಲೇಬೇಕು.
ಕ್ಷೇತ್ರದಲ್ಲಿ ಒಟ್ಟು 17,92,774 ಮತದಾರರಿದ್ದು, 9,02,119 ಪುರುಷರು ಹಾಗೂ 8,90,572 ಮಹಿಳಾ ಹಾಗೂ 83 ಇತರರು ಇದ್ದಾರೆ. ಈ ಪೈಕಿ 7,13,613 ಪುರುಷರು, 6,77,577 ಮಹಿಳೆಯರು ಹಾಗೂ 24 ಇತರರು ಹಕ್ಕು ಚಲಾಯಿಸಿದ್ದಾರೆ. 2014ರಲ್ಲಿ ಶೇ. 67.66ರಷ್ಟು ಮಹಿಳೆಯರು ಮತ ಚಲಾಯಿಸಿದ್ದರೆ, 2019ರಲ್ಲಿ ಶೇ. 68.99ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ. 2024ರಲ್ಲಿ ಶೇ. 75ರಷ್ಟು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 6ರಷ್ಟು ಮಹಿಳಾ ಮತದಾರರ ಸಂಖ್ಯೆ ಹೆಚ್ಚಳವಾಗಿದೆ.
2019ರ ಲೋಕಸಭಾ ಚುನಾವಣೆಗಿಂತಲೂ 2014ರ ಚುನಾವಣೆಯಲ್ಲಿ ಮಹಿಳಾ ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಈ ಬಾರಿ ಎಲ್ಲೆಡೆ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿಬಂದಿವೆ. ಮಹಿಳಾ ಮತದಾರರ ಮನ ಗೆದ್ದಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ಶ್ರೀರಕ್ಷೆಯಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಮಹಿಳಾ ಮತದಾರರೇ ಕಾರಣವಾಗಲಿದ್ದಾರೆ. | ರಾಜೇಶ್ವರಿ ಪಾಟೀಲ, ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಶಿಗ್ಗಾಂವಿ ವಿಧಾನಸಭೆ ಚುನಾವಣೆಯಲ್ಲಿ ಆದಂತೆ ಲೋಕಸಭೆಯಲ್ಲಿ ಆಗುವುದಿಲ್ಲ. ಮಹಿಳಾ ಮತದಾರರಿಗೆ ಗ್ಯಾರಂಟಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಸಹ ಗೊತ್ತಾಗಿದೆ. ವಿದ್ಯಾವಂತರಿಗಿಂತ ಹೆಚ್ಚಾಗಿ ಅವಿದ್ಯಾವಂತರು ಹಾಗೂ ಹಳ್ಳಿಗಳ ಮಹಿಳೆಯರೇ ಹೆಚ್ಚು ಜಾಗೃತರಾಗಿದ್ದಾರೆ. ಕೃಷಿಕರಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯ, ಸಣ್ಣ ಕೆಲಸಕ್ಕೂ ಅಲೆದಾಡಬೇಕಾದ ಸಂದರ್ಭಗಳನ್ನು ಕಣ್ಣಾರೆ ಕಂಡಿದ್ದಾರೆ. ಅಲ್ಲದೆ, ಮೋದಿ ಅವರ ಮೇಲೆ ಅಭಿಮಾನವಿದೆ. ಹಾಗಾಗಿ, ಈ ಬಾರಿಯೂ ಬಿಜೆಪಿ ಗೆಲುವು ಖಚಿತ. | ಭಾರತಿ ಜಂಬಗಿ, ಉತ್ತರ ಕನ್ನಡ ಜಿಲ್ಲಾ ಪ್ರಭಾರಿ, ಬಿಜೆಪಿ, ರಾಣೆಬೆನ್ನೂರ