ಎಲ್ಲ ಇಲಾಖೆ ಅಧಿಕಾರಿಗಳು ತಪ್ಪದೆ ಭಾಗವಹಿಸಿ

24 DVD 01
ದೇವದುರ್ಗ ಮಿನಿವಿಧಾನಸೌಧದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಮುಖಂಡರಾದ ಯಲ್ಲಗೌಡ ಕೆ.ಇರಬಗೇರಾ, ಮಲ್ಲಪ್ಪ ನಾಯಕ, ಸಾಬಗೌಡ, ಲಿಂಗಪ್ಪ ಲಿಂಗದಹಳ್ಳಿ, ಗುರುನಾಥ, ಬಸವರಾಜ, ಭೀಮಣ್ಣ, ತಿಮ್ಮನಗೌಡ, ಶಿವಕುಮಾರ ಇತರರಿದ್ದರು.
Published on

ದೇವದುರ್ಗ: ಪಟ್ಟಣದ ಮಿನಿವಿಧಾನಸೌಧದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ನ.1ರಂದು ತಾಲೂಕು ಆಡಳಿತ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲು ಗುರುವಾರ ತೀರ್ಮಾನ ಕೈಗೊಳ್ಳಲಾಗಿದೆ.

ಉಪತಹಸೀಲ್ದಾರ್ ವೆಂಕಟೇಶ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ತಾಲೂಕಿನ ಎಲ್ಲ ಇಲಾಖೆ ಕಚೇರಿಗಳಲ್ಲಿ ಬೆಳಗ್ಗೆ ಕಡ್ಡಾಯವಾಗಿ ಆಚರಣೆ ಮಾಡಬೇಕು. ನಂತರ ಇಲ್ಲಿನ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಎಲ್ಲ ಇಲಾಖೆ ಅಧಿಕಾರಿಗಳು ತಪ್ಪದೆ ಭಾಗವಹಿಸಬೇಕು. ಒಂದುದಿನದ ಮುಂಚೆ ಕಚೇರಿಗಳಲ್ಲಿ ಸ್ವಚ್ಛತೆ ಕೈಗೊಂಡು ವಿದ್ಯುತ್ ದೀಪಲಂಕಾರ ಮಾಡಬೇಕು ಎಂದು ಸೂಚಿಸಿದರು.

ತಾಪಂ ಕಚೇರಿಯಿಂದ ವೇದಿಕೆ ಕಾರ್ಯಕ್ರಮದವರೆಗೆ ವಿವಿಧ ಬಡಾವಣೆ ಮೂಲಕ ಶ್ರೀಭುವನೇಶ್ವರಿ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ಭಾಜಭಜಂತ್ರಿ, ಡೊಳ್ಳು ಕುಣಿತ, ಕಲಾವಿದರ ನೃತ್ಯ ಸಂಗೀತದೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು. ಪೊಲೀಸ್ ಇಲಾಖೆ ಅಗತ್ಯ ಭದ್ರತೆ, ಜೆಸ್ಕಾಂ ವಿದ್ಯುತ್ ಸೌಲಭ್ಯ, ಪುರಸಭೆ ಸ್ವಚ್ಛತೆ, ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಪ್ರಮುಖ್ಯ ರಸ್ತೆಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಹಾತ್ಮರ ವೃತ್ತಗಳಗೆ ದೀಪಾಲಂಕಾರ ಕೈಗೊಳ್ಳಬೇಕು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಾಹಾರ ಮತ್ತು ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ವೇದಿಕೆಯನ್ನು ತಳಿರು ತೋರಣಗಳಿಂದ ಶೃಂಗರಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ದೈಹಿಕ ಶಿಕ್ಷಣಾಧಿಕಾರಿ ಮುದುಕಪ್ಪ ಕವಡಿಮಠ, ಮೇಲ್ವಿಚಾರಕಿ ಗಂಗಮ್ಮ, ಮೋಹನ್ ಕಾಂಬ್ಳೆಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net