ಮತದಾನ ಪ್ರಮಾಣ ಹೆಚ್ಚಳಕ್ಕೆ ಇಡೀ ದಿನ ಜಾಗೃತಿ ಕಾರ್ಯಕ್ರಮ

17 ckm 3 dr.gopalakrishna
ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಬಿ.ಗೋಪಾಲಕೃಷ್ಣ
Published on

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶದಿಂದ ಏ. ೨೦ರಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆಯವರೆಗೆ ನಗರದ ಎಂ.ಜಿ.ರಸ್ತೆಯಲ್ಲಿ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಬಿ.ಗೋಪಾಲಕೃಷ್ಣ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆ ಘೋಷಣೆ ಆದಾಗಿನಿಂದ ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಮಟ್ಟದವರೆಗೆ ಮತದಾನದ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮ ನಡೆಸಲಾಗುತ್ತಿದೆ. ಇದೀಗೇ. ೨೦ರಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಚಿಕ್ಕ ಎಂಬ ಹುಲಿ ಗುರುತಿನ ಲಾಂಛನವನ್ನು ಸಿದ್ಧಪಡಿಸಿಕೊಂಡು ಅದರ ಆಕರ್ಷಣೆಯೊಂದಿಗೆ ಮತದಾನದ ಜಾಗೃತಿ ಅರಿವು ಮೂಡಿಸಲಾಗುತ್ತಿದೆ. ಏ.೨೦ ರಂದು ನಗರದ ಎಂಜಿ ರಸ್ತೆಯಲ್ಲಿ ಬೆಳಗ್ಗೆ ೬.೩೦ಕ್ಕೆ ಯೋಗದ ಮೂಲಕ ಆರಂಭವಾಗುವ ಕಾರ್ಯಕ್ರಮಗಳು ಸಂಜೆ ವೇದಿಕೆ ಕಾರ್ಯಕ್ರಮದ ಮೂಲಕ ಮುಕ್ತಾಯವಾಗಲಿದೆ ಎಂದರು.
ಅಂದು ನಿಧಾನಗತಿ ಸೈಕಲ್‌ಸ್ಪರ್ಧೆ, ಟ್ರಜರ್ ಹಂಟ್, ಮೋಟಾರ್ ಸೈಕಲ್ ಸ್ಪರ್ಧೆ ಮತ್ತು ನಡಿಗೆ ಹಾಗೂ ನಿಧಾನ ನಡಿಗೆ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ ೫೦೦೦, ೩೦೦೦ ಮತ್ತು ೨೦೦೦ ರೂ. ಮೊತ್ತದ ಬಹುಮಾನವಾಗಿ ಸ್ತ್ರೀ ಶಕ್ತಿ ಸಂಘಗಳ ಉತ್ಪನ್ನಗಳಾದ ಅಸ್ಮಿತೆ ಅಂಗಡಿಯಲ್ಲಿ ಕರಕುಶಲ ಹಾಗೂ ಆಹಾರ ವಸ್ತುಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮಹಿಳೆಯರಿಗೆ ಮನರಂಜನೆ ಕ್ರೀಡೆಗಳಾದ ದೇಶೀ ಕ್ರೀಡೆ, ರಂಗೋಲಿ ಸ್ಪರ್ಧೆ, ತರಕಾರಿ ತಿನ್ನುವ ಸ್ಪರ್ಧೆ, ಪುರುಷರಿಗೆ ಮುದ್ದೆ ತಿನ್ನುವ ಸ್ಪರ್ಧೆ, ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಎಲ್ಲ ಆಕರ್ಷಣೆಗಳೊಂದಿಗೆ ಶ್ವಾನ ಪ್ರದರ್ಶನ, ಚಿತ್ರಕಲಾ ಕಾರ್ಯಗಾರ ಮತ್ತು ಪ್ರದರ್ಶನ, ಆಹಾರ ಮಳಿಗೆಯೊಂದಿಗೆ ಹೊಸ ಮತದಾರರ ಆಕರ್ಷಣೆಗಾಗಿ ೧೮ ಕೆ.ಜಿ ಕೇಕ್ ಕ್ಯಾಂಪಿಯನ್ ಮತ್ತು ಹಿರಿಯ ನಾಗರೀಕರಿಗೆ ಬಿಪಿ, ಶುಗರ್, ಹಿಮೋಗ್ಲೋಬಿನ್ ಟೆಸ್ಟ್ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಭಾಗದ ಮತದಾರರು ಮತದಾನದಲ್ಲಿ ಹೆಚ್ಚು ಭಾಗವಹಿಸುವಂತೆ ಮಾಡಲು ನಮ್ಮ ನಡೆ ಮತಕಟ್ಟೆ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಾಳೆಹೊಳೆಯಲ್ಲಿ ಜಲಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಮತದಾನ ನಡೆಯುವ ಏ. ೨೬ರವರೆಗೆ ನಿರಂತರವಾಗಿ ಅರಿವು ಕಾರ್ಯಕ್ರಮ ನಡೆಸಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net