ವ್ಯವಸ್ಥೆ ಬದಲಾವಣೆಗೆ ಎಲ್ಲ ವರ್ಗಗಳು ಬೆಸೆಯುವುದು ಅಗತ್ಯ

kdr 5
Published on

ಕಡೂರು: ಶ್ರೇಣೀಕೃತ ಸಮಾಜ ವ್ಯವಸ್ಥೆ ಬದಲಾಗಲು ಎಲ್ಲ ವರ್ಗಗಳನ್ನು ಬೆಸೆಯಬೇಕಾದ ಅಗತ್ಯವಿದೆ. ಶೋಷಿತರು, ಬಡವರಲ್ಲಿ ಆತ್ಮಾಭಿಮಾನ, ಸ್ವಾಭಿಮಾನ ಉಕ್ಕಬೇಕು. ಎಲ್ಲರ ಸಮನ್ವಯವಾಗಿ ಸಮ ಸಮಾಜ ನಿರ್ಮಾಣವಾಗಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.

ಜಿ.ತಿಮ್ಮಾಪುರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶ್ರಾವಣ ಸಂಜೆ- ಶರಣರ ಸಂದೇಶ ಸಮಾರೋಪದಲ್ಲಿ ನಮ್ಮ ನಡೆ-ಕಲ್ಯಾಣದೆಡೆಗೆ ವಿಷಯ ಕುರಿತು ಉಪನ್ಯಾಸ ನೀಡಿ, ಜಾತಿಯ ಮೇಲಾಟ, ಅಸಮಾನತೆ, ಚಿಂತನೆಗಳ ವೈಪರೀತ್ಯ, ಧರ್ಮೋದ್ರೇಕ ಹಾಗೂ ಮೌಢ್ಯಗಳ ಸಂಕೋಲೆಯಲ್ಲಿರುವ ನಮ್ಮನ್ನು ಎಚ್ಚರಿಸಲು ಬಸವಣ್ಣ ಮತ್ತೆ ಬರಬೇಕು ಹಾಗೂ ಅವರ ಚಿಂತನೆ ನಮಗೆ ದಾರಿದೀಪವಾಗಬೇಕು ಎಂದರು.

ಇಂಗ್ಲೆಂಡ್‌ನಲ್ಲಿ 13ನೇ ಶತಮಾನ, ಫ್ರಾನ್ಸ್‌ಲ್ಲಿ 18ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದಿತು. ರಷ್ಯಾದಲ್ಲಿ 20ನೇ ಶತಮಾನದಲ್ಲಿ ಕಾರ್ಮಿಕರ ಕ್ರಾಂತಿಯಾಯಿತು. ಬಡವರ, ಕಾರ್ಮಿಕರ, ದಲಿತರ ಮತ್ತು ಶೋಷಿತರ ಅಭ್ಯುದಯಕ್ಕೆ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆಯ ಜಾರಿಗಾಗಿ ಕಲ್ಯಾಣದಲ್ಲಿ ಬಸವಣ್ಣ 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ನಾಂದಿ ಹಾಡಿದರು ಎಂದು ತಿಳಿಸಿದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವತತ್ವವು ಜನಮನದಲ್ಲಿ ಸ್ಥಾಯಿಯಾಗಿ ಬದುಕಿನಲ್ಲಿ ಜಂಗಮವಾಗಬೇಕು. ಶ್ರಾವಣ ಸಂಜೆ ಕಾರ್ಯಕ್ರಮಗಳ ಮೂಲಕ ಬಸವತತ್ವದ ಬೀಜವನ್ನು ಬಿತ್ತುವ, ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಚಿಂತನೆ ಸಾರ್ಥಕತೆ ಕಾಣುವಲ್ಲಿ ಯಶಸ್ವಿಯಾಗುತ್ತಿದೆ. ಶರಣರು ವಚನಗಳನ್ನು ಲೋಕ ತಿದ್ದುವುದಕ್ಕಾಗಿ ಹೇಳಿಲ್ಲ, ನಡೆ-ನುಡಿ ಒಂದಾಗಿ ಬದುಕಿನ ಸುಧಾರಣೆ ಆಗದಿದ್ದರೆ ಫಲವಿಲ್ಲ ಎಂದು ಚಿಂತಿಸಿ ಅದರಂತೆ ನಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net