

ಗಂಗಾವತಿ: ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಮೂತ್ರಾಲಯಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರಸಭೆ ಮುಂದೆ ಗುರುವಾರ ಪ್ರತಿಭಟನೆ ಆರೋಗ್ಯ ನಿರೀಕ್ಷಕ ಎ.ನಾಗರಾಜಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಗಂಗಾವತಿ ವಾಣಿಜ್ಯ ನಗರವಾಗಿದ್ದು, ನಿತ್ಯವೂ ಗ್ರಾಮೀಣ ಭಾಗದ ಜನರು ವ್ಯಾಪಾರ ವಹಿವಾಟು ಸೇರಿ ಇತರ ಕೆಲಸಗಳಿಗೆ ಬರುತ್ತಿದ್ದಾರೆ. ಮೂತ್ರಾಲಯಗಳ ಕೊರತೆಯಿಂದ ರಸ್ತೆ ಬದಿ ಮೂತ್ರ ವಿಸರ್ಜಿಸುವ ಸ್ಥಿತಿ ಬಂದಿದ್ದು, ಮಹಿಳೆಯರು ಮತ್ತು ಸಕ್ಕರೆ ಕಾಯಿಲೆ ಇದ್ದವರಿಗೆ ತೊಂದರೆಯಾಗಿದೆ. ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸುಧಾರಿತ ಮೂತ್ರಾಲಯಗಳನ್ನು ನಿರ್ಮಿಸಬೇಕಿದೆ.
ಅದರಂತೆ ನಗರಸಭೆ ಕಾಂಪೌಂಡ್ಗೆ ಹೊಂದಿಕೊಂಡು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ ವ್ಯಾಪಾರಿಗಳಿಗೆ ಅನುಕೂಲವಾಗಲಿದ್ದು, ನಗರಸಭೆ ಆದಾಯ ಹೆಚ್ಚಲಿದೆ. ಜನಜಂಗುಳಿ ನಿಯಂತ್ರಣಕ್ಕೆ ನಗರಸಭೆ ಹಿಂಭಾಗದಲ್ಲಿ ಇನ್ನೊಂದು ದ್ವಾರ ಬಾಗಿಲು ನಿರ್ಮಿಸುವ ಅಗತ್ಯವಿದೆ. ಮುಖ್ಯದ್ವಾರ ರಸ್ತೆಗೆ ಹೊಂದಿಕೊಂಡಿದ್ದು, ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿವೆ. ಜನರ ಅನುಕೂಲಕ್ಕಾಗಿ ಇನ್ನೊದು ದ್ವಾರಬಾಗಿಲು ನಿರ್ಮಿಸುವಂತೆ ಒತ್ತಾಯಿಸಿದರು.