ಮೊಬೈಲ್​ಗೆ ಬಂದ ಲಿಂಕ್​ ಕ್ಲಿಕ್​ ಮಾಡಿ ಸೆರೆಯಾದ ಅಜ್ಜ! 75 ವರ್ಷದ ವೃದ್ಧನಿಗೆ ಅಶ್ಲೀಲ ವಿಡಿಯೋ ತೋರಿಸಿ ಕೊಟ್ಟ ಕಾಟ ಅಷ್ಟಿಷ್ಟಲ್ಲ

blackmail fraud mobile
Published on

ಬೆಂಗಳೂರು: ಮೊಬೈಲ್​ಗೆ ಬರುವ ಆನ್​ಲೈನ್​ ಲಿಂಕ್​ಗಳನ್ನು ಕ್ಲಿಕ್​ ಮಾಡೋಕು ಮುನ್ನ ಜೋಕೆ! 75 ವರ್ಷದ ವೃದ್ಧರೊಬ್ಬರು ಮೊಬೈಲ್​​ಗೆ ಬಂದ ಲಿಂಕ್​ ಕ್ಲಿಕ್​ ಮಾಡಿ ಅಶ್ಲೀಲ ವಿಡಿಯೋ ನೋಡಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊನೆಗೆ ದಿಕ್ಕು ತೋಚದೆ ಆಗ್ನೇಯ ವಿಭಾಗ ಸಿಇಎನ್​ ಠಾಣೆ ಮೆಟ್ಟಿಲೇರಿದ್ದಾರೆ.

ಬಿಟಿಎಂ ಲೇಔಟ್​ನಲ್ಲಿ ನೆಲೆಸಿರುವ 75 ವರ್ಷದ ವೃದ್ಧರೊಬ್ಬರ ಮೊಬೈಲ್​ಗೆ ಕಳೆದ ಅಕ್ಟೋಬರ್​ನಲ್ಲಿ ಅನಾಮಧೇಯ ವ್ಯಕ್ತಿಯಿಂದ ಲಿಂಕ್​ ಬಂದಿದೆ. ಕುತೂಹಲಕ್ಕೆ ಅದರ ಮೇಲೆ ವೃದ್ಧ, ಕ್ಲಿಕ್​ ಮಾಡಿ ಓಪನ್​ ಮಾಡಿದ್ದಾರೆ. ಕೂಡಲೇ ಯುವತಿಯ ಅಶ್ಲೀಲ ವಿಡಿಯೋ ಬಂದಿದೆ. ಅದನ್ನು ಕೆಲ ಹೊತ್ತು ಗಮನಿಸಿದ್ದಾರೆ. ಮತ್ತೊಂದೆಡೆ ವೃದ್ಧನು ನೋಡುತ್ತಿರುವ ಸ್ಕ್ರೀನ್​ನ್ನು ಸೈಬರ್​ ಕಳ್ಳರು ರೆಡಾರ್ಕ್​ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ವೃದ್ಧನ ಮೊಬೈಲ್​ಗೆ ಅಪರಿಚಿತ ನಂಬರ್​ನಿಂದ ಕರೆ ಬಂದಿದ್ದು, ಸ್ವೀಕರಿಸಿದಾಗ ವ್ಯಕ್ತಿಯೊಬ್ಬ ಮಾತನಾಡಿದ್ದಾನೆ.

ಮೊಬೈಲ್​ನಲ್ಲಿ ವಿಡಿಯೋ ಕಾಲ್​ ಮಾಡಿ ಯುವತಿ ಜತೆಗೆ ಅಶ್ಲೀಲವಾಗಿ ನಡೆದುಕೊಂಡಿರುವ ಬಗ್ಗೆ ನಮ್ಮ ಬಳಿ ವಿಡಿಯೋ ಇದೆ. ತಕ್ಷಣ ನಮಗೆ ಹಣ ನೀಡಿದರೆ ನಿಮ್ಮ ವಿಡಿಯೋವನ್ನು ಡಿಲೀಟ್​ ಮಾಡುತ್ತೇನೆ. ಇಲ್ಲವಾದರೆ, ಜಾಲತಾಣದಲ್ಲಿ ವೈರಲ್​ ಮಾಡಿ ಮರ್ಯಾದೆ ತೆಗೆಯುವುದಾಗಿ ಬ್ಲ್ಯಾಕ್​ಮೇಲ್​ ಶುರು ಮಾಡಿದ್ದಾನೆ. ಹೆದರಿದ ವೃದ್ಧ, ಹಂತ ಹಂತವಾಗಿ 6.24 ಲಕ್ಷ ರೂ. ಅನ್ನು ಆನ್​ಲೈನ್​ನಲ್ಲಿ ವರ್ಗಾವಣೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಂಚಕರು ಹಣಕ್ಕಾಗಿ ಪದೇಪದೆ ಪೀಡಿಸಿದ್ದಾರೆ.

ವಂಚಕರ ಕಾಟ ಸಹಿಸಲಾಗದೆ ನೊಂದು ವೃದ್ಧ, ಠಾಣೆಗೆ ದೂರು ನೀಡಿದ್ದಾರೆ. ಇವರು ಕೊಟ್ಟು ದೂರಿನ ಮೇರೆಗೆ ಆಗ್ನೇಯ ವಿಭಾಗ ಸಿಇಎನ್​ ಪೊಲೀಸರು, ಆರೋಪಿಗಳಾದ ಸೌರವ್​, ಬಲ್​ಜಿತ್​ ರೈ ಮತ್ತು ರೇಷ್ಮಾ ಎಂಬಾಕೆ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net