

ವಿಜಯಾಚಾರ್ಯ ಪುರೋಹಿತ ಕೆಂಭಾವಿ
ಕೇಂದ್ರ ಸರ್ಕಾರ ಲಾಕ್ಡೌನ್ ಅವಧಿ ವಿಸ್ತರಣೆ ಮಾಡುತ್ತಿದ್ದಂತೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣಾ ಸೇರಿ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಸುತ್ತಮುತ್ತಲಿನ ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ಊರಿಗೆ ಮರಳಲು ಆರಂಭಿಸಿದ್ದು, ಇದರಿಂದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪುಣೆ, ಸತಾರಾ, ಜತ್, ಹೈದರಾಬಾದ್, ವಿಶಾಖಪಟ್ಟಣ ಸೇರಿ ಹಲವು ಪ್ರಮುಖ ನಗರಗಳಲ್ಲಿ ಹೆಚ್ಚಾಗಿ ದುಡಿಯಲು ಹೋದ ಕೂಲಿ ಕಾರ್ಮಿಕರೇ ಮರಳಿ ಬರುತ್ತಿದ್ದು ಇದರಿಂದ ಹಲವು ಗ್ರಾಮಗಳಲ್ಲಿ ಆತಂಕದ ಛಾಯೆ ಮನೆಮಾಡಿದೆ. ವಲಯದ ಹತ್ತು ಗ್ರಾಪಂ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಗ್ರಾಮಗಳ ಜನತೆ ಕಾಖರ್ಾನೆ, ಕಾಲುವೆ ಕೆಲಸ, ಚಾಲಕ ವೃತ್ತಿ ಸೇರಿ ಹಲವು ರೀತಿಯಲ್ಲಿ ದುಡಿಮೆ ಮಾಡಲು ಪರರಾಜ್ಯಗಳಿಗೆ ತೆರಳಿದ್ದು ಈಗ ಕರೊನಾ ಭಯದಿಂದ ದಿನದ ಒಂದು ಹೊತ್ತಿಗೆ ಊಟ ಸಿಗದೆ ಪರದಾಡಿ ಶತಾಯಗತಾಯ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ.
ಮುಖ್ಯರಸ್ತೆಯಲ್ಲಿ ಇರುವ ಚೆಕ್ಪೋಸ್ಟ್ ಕಣ್ಣುತಪ್ಪಿಸಿ ಕೆಲವರು ಬಂದರೆ ಇನ್ನೂ ಕೆಲವರು ಅಲ್ಲಿನ ಅಧಿಕೃತ ಪರವಾನಿಗೆ ಪಡೆದು ಬರುತ್ತಿದ್ದು ಇದರಿಂದ ಇಲ್ಲಿನ ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಬಂದ ಜನರನ್ನು ಹೋಮ್ ಕ್ವಾರೆಂಟೈನ್ಗೆ ಒಳಪಡಿಸಲು ಹರಸಾಹಸ ಪಡುತ್ತಿದ್ದಾರೆ.
ಸಧ್ಯ ರೆಡ್ಜೋನ್ಗೆ ತಲುಪಿರುವ ಕಲಬುರಗಿ ಹೆಸರು ಕೇಳಿದರೆ ಈ ಭಾಗದ ಜನತೆಯಲ್ಲಿ ನಡುಕ ಶುರುವಾಗುತ್ತಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕರೊನಾ ವೈರಸ್ ಕಾಲಿಟ್ಟಿಲ್ಲ. ಹೀಗಾಗಿ ಜನತೆ ನೆಮ್ಮದಿಯಿಂದಿದ್ದಾರೆ. ಆದರೆ ಸದ್ಯ ತಂಡೋಪತಂಡವಾಗಿ ಬರುತ್ತಿರುವ ವಲಸಿಗರಿಂದ ಭಯ ಆವರಿಸುತ್ತಿದ್ದು ಜಿಲ್ಲಾಡಳಿತ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಅಗ್ರಹವಾಗಿದೆ.