ಧರ್ಮಪ್ರಾಂತ್ಯಕ್ಕೆ ಧನ್ಯತೆಯ ಕ್ಷಣ: ಆಲ್ಫ್ರೆಡ್ ರೋಚ್ ಪುನೀತ ಪದವಿ ಪ್ರಕ್ರಿಯೆಗೆ ಚಾಲನೆ ನೀಡಿ ಬಿಷಪ್ ಅಭಿಮತ

udp new
Published on

ಉಡುಪಿ: ಕಪುಚಿನ್ ಸಭೆಯ ಧರ್ಮಗುರು ಆಲ್ಫ್ರೆಡ್ ರೋಚ್ ಅವರನ್ನು ಪುನೀತ ಪದವಿಗೇರಿಸುವ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಪ್ರಕ್ರಿಯೆಗೆ ಸೋಮವಾರ ಬ್ರಹ್ಮಾವರದ ಪವಿತ್ರ ಕುಟುಂಬ ದೇವಾಲಯದಲ್ಲಿ ಚಾಲನೆ ನೀಡಲಾಯಿತು.

ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊ ದಿವ್ಯ ಬಲಿಪೂಜೆ ನೆರವೇರಿಸಿ ತಪಾಸಣಾ ಸಮಿತಿಯ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಆಶೀರ್ವಚನ ನೀಡಿದ ಅವರು, ಇದೇ ಮಣ್ಣಿನಲ್ಲಿ ಹುಟ್ಟಿ ಸಾತ್ವಿಕ ಜೀವನದ ಮೂಲಕ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿ ಸಂತ ಪದವಿಯತ್ತ ತೆರಳಲು ಸನ್ನದ್ಧರಾಗಿರುವ ಧರ್ಮಗುರು ರೋಚ್ ಅವರನ್ನು ಪಡೆದಿರುವ ಧರ್ಮಪ್ರಾಂತ್ಯ ನಿಜಕ್ಕೂ ಧನ್ಯ. ಇದೊಂದು ಚಾರಿತ್ರಿಕ ಘಟನೆ. ದೀರ್ಘಕಾಲದ ಪ್ರಕ್ರಿಯೆಯಾಗಿದ್ದರೂ ಆದಷ್ಟು ಬೇಗ ಸಂತ ಪದವಿ ಲಭಿಸುವಂತಾಗಲಿ ಎಂದು ಆಶಿಸಿದರು.

ಕಪುಚಿನ್ ಸಭೆ ಕರ್ನಾಟಕ ಪ್ರಾಂತ್ಯ ಮುಖ್ಯಸ್ಥ ಆಲ್ವಿನ್ ಡಾಯಸ್, ಸಹ ಮುಖ್ಯಸ್ಥ ಪಾವ್ಲ್ ಮೆಲ್ವಿನ್ ಫರ್ನಾಂಡಿಸ್, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಡಾ.ಬ್ಯಾಪ್ಟಿಸ್ ಮಿನೇಜಸ್, ಬ್ರಹ್ಮಾವರ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ವಿಕ್ಟರ್ ಫರ್ನಾಂಡಿಸ್ ಮೊದಲಾದವರು ಭಾಗಿಯಾಗಿದ್ದರು.
ಸಂತ ಪದವಿಗೇರಿಸುವ ಪ್ರಕ್ರಿಯೆ ದೀರ್ಘ ಕಾಲದ್ದಾಗಿದ್ದು, ದೇವರ ಸೇವಕ, ಮಾನ್ಯವಂತ, ಪುನೀತ ಹಾಗೂ ಸಂತ ಈ ನಾಲ್ಕು ಹಂತಗಳಲ್ಲಿ ನಡೆಯಲಿದೆ. ಇದೇ ವೇಳೆ ರೋಚ್ ಅವರಿಗೆ ಪುನೀತ ಪದವಿಗೇರಿಸಲಾಗುವ ಪ್ರಕ್ರಿಯೆ ದಸ್ತಾವೇಜು ದಾಖಲೀಕರಣ ಮತ್ತು ಮಾಹಿತಿಗಾಗಿ ವೆಬ್‌ಸೈಟ್ ಮತ್ತು ಕಚೇರಿ ಉದ್ಘಾಟಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

ತಪಾಸಣಾ ಸಮಿತಿ ನೇಮಕ
ಧರ್ಮಪ್ರಾಂತ್ಯ ಮಟ್ಟದ ತಪಾಸಣಾ ಸಮಿತಿ ಮುಖ್ಯಸ್ಥರಾಗಿ ಶ್ರೇಷ್ಠ ಧರ್ಮಗುರು ಡಾ.ಬ್ಯಾಪ್ಟಿಸ್ ಮಿನೇಜಸ್ ನೇಮಕವಾಗಿದ್ದಾರೆ. ಪ್ರಮೋಟರ್ ಆಫ್ ಜಸ್ಟಿಸ್ ಸದಸ್ಯರಾಗಿ ಸುನೀಲ್ ಕುಮಾರ್ ಡಿಸೋಜ, ನೋಟರಿಯಾಗಿ ರವಿ ರಾಜೇಶ್ ಸೆರಾವೊ, ಇತಿಹಾಸ ಆಯೋಗ ಸದಸ್ಯರಾಗಿ ಸ್ಟೀವನ್ ಡಿಸೋಜ, ಮೇಲ್ವಿಚಾರಕರಾಗಿ ಬ್ಯಾಪ್ಟಿಸ್ಸ್ ರೊಡ್ರಿಗಸ್, ಜೊಯೇಲ್ ಲೋಪಿಸ್, ಸಾಂತಾ ಲೋಪಿಸ್ ಸೇವೆ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net