

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಅಲ್ಲಲ್ಲ ಸಾಧಾರಣ ಮಳೆಯಾಗಿದ್ದು, ಜೂ.20ರಂದು ಎಲ್ಲೋ ಅಲರ್ಟ್ನ್ನು ಹವಾಮಾನ ಇಲಾಖೆ ಘೋಷಿಸಲಾಗಿದೆ.
ಬುಧವಾರ ಜಿಲ್ಲೆಯಾಧ್ಯಂತ ಸಾಧಾರಣ ಮಳೆಯಾಗಿದೆ. ಈಗಿನ ಪ್ರಕಾರ ಜೂನ್ 21ರಿಂದ ರಾಜ್ಯದಾದ್ಯಂತ ಮುಂಗಾರು ದುರ್ಬಲಗೊಳ್ಳುವ ಮುನ್ಸೂಚೆನೆ ಇದ್ದು, ಜೂನ್ 23ರಿಂದ ಸ್ವಲ್ಪ ಮಟ್ಟಿಗೆ ಚುರುಕಾಗುವ ಲಕ್ಷಣಗಳಿವೆ. ಜಿಲ್ಲೆಯಾದ್ಯಂತ ಬೆಳಗ್ಗೆ ಕೆಲಕಾಲ ಉತ್ತಮ ಮಳೆಯಾಗಿತ್ತು. ಬಳಿಕ ಸಂಜೆವರೆಗೂ ಮೋಡ ಕವಿದ ವಾತಾವರಣವಿದ್ದು, ನಡುನಡುವೆ ಸಾಧಾರಣ ಮಳೆಯಾಗಿದೆ.
ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಅಲ್ಲಲ್ಲಿ ಮಳೆಯಾಗಿತ್ತು. ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 30.1ಮಿಮೀ ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಕರಾವಳಿ ತೀರಪ್ರದೇಶದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
*ಉಳ್ಳಾಲದಲ್ಲಿ ಗರಿಷ್ಠ ಮಳೆ
ಜಿಲ್ಲೆಯ ಗ್ರಾಮೀಣ ಭಾಗವಾದ ಸುಳ್ಯ, ಬೆಳ್ಳಾರೆ, ಪುತ್ತೂರು ಭಾಗದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 32.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ 24.5 ಮಿ.ಮೀ, ಬಂಟ್ವಾಳ 32.5 ಮಿ.ಮೀ, ಮಂಗಳೂರು 20.1 ಮಿ.ಮೀ, ಪುತ್ತೂರು 31.1 ಮಿ.ಮೀ, ಸುಳ್ಯ 31.7 ಮಿ.ಮೀ, ಮೂಡುಬಿದಿರೆ 31.8 ಮಿ.ಮೀ, ಕಡಬ 31.9 ಮಿ.ಮೀ. ಮೂಲ್ಕಿ 30.1 ಮಿ.ಮೀ. ಮಳೆ ದಾಖಲಾಗಿದೆ.