

ಮಂಗಳೂರು: ಮಳೆ ಆರಂಭವಾಗುತ್ತಿದ್ದಂತೆ ಕಾಂಕ್ರೀಟು, ಡಾಂಬರು ರಸ್ತೆಗಳಲ್ಲಿ ವೇಗವಾಗಿ ಚಲಿಸುತ್ತಿರುವ ವಾಹನಗಳು ಬ್ರೇಕ್ ಹಾಕಿದಾಗ ನಿಯಂತ್ರಣ ಕಳೆದುಕೊಂಡು ಅಪಘಾತವಾಗುವುದು ಸಹಜ. ರಸ್ತೆಗಳಲ್ಲಿ ಅಲ್ಲಲ್ಲಿ ಮರಳು, ಕಲ್ಲು, ಮಣ್ಣು ನಿಂತು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದರ ಜತೆಗೆ ದ್ವಿಚಕ್ರ ಸವಾರರ ಪ್ರಾಣಕ್ಕೂ ಸಂಚಕಾರ ಉಂಟಾಗುತ್ತಿದೆ. ಮಳೆಗಾಲದ ಆರಂಭದಲ್ಲಿ ವಾಹನ ಚಾಲಕರಿಗೆ ಈ ಮಾಹಿತಿ ತಿಳಿದಿರುವುದು ಅವಶ್ಯ.
ರಸ್ತೆಯಲ್ಲಿ ಬಿದ್ದ ಆಯಿಲ್, ಪೆಟ್ರೋಲಿಯಂ ಉತ್ಪನ್ನಗಳು ಜಾರುವುದರಿಂದ ವಾಹನಗಳು ನಿಯಂತ್ರಣಕ್ಕೆ ಸಿಗುವುದಿಲ್ಲ. ಹೆದ್ದಾರಿಗಳಲ್ಲಿ ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಇದೇ ಕಾರಣದಿಂದ ಅಪಘಾತ ನಡೆದು ಹಲವು ಮಂದಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ.
ನಗರದಲ್ಲಿ ಕೆಲವು ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ಬಂದಾಗ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಈ ಸಂದರ್ಭ ಕೊಚ್ಚಿಕೊಂಡು ಬಂದ ಮಣ್ಣು, ಮರಳು, ರಸ್ತೆಯಲ್ಲೇ ನಿಂತಿದೆ. ದ್ವಿಚಕ್ರ ವಾಹನ ಮಾತ್ರವಲ್ಲ ಕಾರು, ಆಟೋರಿಕ್ಷಾ ಮುಂತಾದ ಲಘು ವಾಹನಗಳು ಕೂಡಾ ಸ್ಕಿಡ್ ಆಗಿ ಅಪಘಾತಕ್ಕೆ ಕಾರಣವಾಗುತ್ತಿದೆ.
ನಗರದ ಬೋಂದೆಲ್, ಪದವಿನಂಗಡಿ, ಬಂಟ್ಸ್ ಹಾಸ್ಟೆಲ್, ಕೆ.ಎಸ್.ರಾವ್ ರಸ್ತೆ, ಬಿಜೈ, ಎಂ.ಜಿ.ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಮರಳು, ತುಂಬಿಕೊಂಡಿದೆ. ಸರ್ಕೀಟ್ ಹೌಸ್ ಎದುರು ಮರಳು, ಮಣ್ಣು ರಸ್ತೆಯಿಂದ ತೆಗೆದಷ್ಟು, ಮಳೆ ಬರುವಾಗ ಮತ್ತೆ ಬಂದು ರಸ್ತೆಯಲ್ಲಿ ಹರಡಿಕೊಳ್ಳುತ್ತದೆ.
ದ್ವಿಚಕ್ರ ವಾಹನ ಸವಾರರು ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ. ರಸ್ತೆಯಲ್ಲಿರುವ ಮರಳು,. ಮಣ್ಣಿನ ಮೇಲೆ ಬ್ರೇಕ್ ಹಾಕುವುದನ್ನು ತಪ್ಪಿಸಿ. ಏಕೆಂದರೆ ಬ್ರೇಕ್ ಹಾಕಿದ ತಕ್ಷಣ ವಾಹನ ಸ್ಕಿಡ್ ಆಗಿ ಬೀಳುವ ಸಾಧ್ಯತೆ ಹೆಚ್ಚು. ರಾತ್ರಿ ವೇಳೆ ರಸ್ತೆಯಲ್ಲಿ ಮರಳು ಇರುವುದು ಗಮನಕ್ಕೆ ಬರುವುದಿಲ್ಲ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ನಿಧಾನವಾಗಿ ಸಂಚರಿಸುವುದು ಒಳಿತು.
ನಗರದ ಹಲವು ಕಡೆ ರಸ್ತೆಗಳಲ್ಲೇ ಮರಳು, ಕಲ್ಲು, ಮಣ್ಣು ತಂದು ಹಾಕಿದ್ದಾರೆ. ಪದವಿನಂಗಡಿಯಲ್ಲಿ ವಿಮಾನ ನಿಲ್ದಾಣ ರಸ್ತೆಯ ಅರ್ಧದ ತನಕ ಮರಳು ಹರಡಿಕೊಂಡಿದೆ. ದ್ವಿಚಕ್ರ ಸವಾರರಿಗೆ ಅಪಾಯಕಾರಿಯಾಗಿದೆ. ಬೋಂದೆಲ್ ಬಳಿ ರಸ್ತೆಯಲ್ಲೇ ಮಣ್ಣಿನ ರಾಶಿ ಇದೆ. ನಗರದ ಹಲವು ಕಡೆಗಳಲ್ಲಿ ಇಂತಹ ಸಮಸ್ಯೆಗಳಿವೆ.
ಕಟ್ಟಡ ನಿರ್ಮಾಣಕ್ಕಾಗಿ ತಂದು ಹಾಕಿದ ಮರಳು ಕಾಂಕ್ರೀಟು ಅರ್ಧ ರಸ್ತೆಯ ತನಕ ವ್ಯಾಪಿಸಿದೆ. ವೇಗವಾಗಿ ಬರುವ ವಾಹನಗಳು ಸ್ಕಿಡ್ ಆಗುವ ಸಂದರ್ಭ ಹೆಚ್ಚಾಗಿದೆ. ಸಂಬಂಧಪಟ್ಟವರು ತಕ್ಷಣ ತೆರವು ಮಾಡಲು ಕ್ರಮ ಕೈಗೊಳ್ಳಬೇಕು.- ಚಿರಂತ್ ಬೊಲ್ಪುಗುಡ್ಡೆ ಮಳೆ ನೀರಿನೊಂದಿಗೆ ಬಂದು ರಸ್ತೆಯಲ್ಲಿ ಶೇಖರಣೆಗೊಂಡ ಮರಳು, ಮಣ್ಣು ಪಾಲಿಕೆ ವತಿಯಿಂದ ತೆರವು ಮಾಡಲಾಗುವುದು. ಖಾಸಗಿ ವ್ಯಕ್ತಿಗಳು ರಸ್ತೆಯಲ್ಲಿ ಮರಳು, ಕಲ್ಲು ತಂದು ಹಾಕಿ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಉಂಟು ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.-ಜಯಾನಂದ ಅಂಚನ್ ಮೇಯರ್ https://www.vijayavani.net/%e0%b2%ae%e0%b2%b3%e0%b3%86-%e0%b2%b8%e0%b2%bf%e0%b2%a1%e0%b2%bf%e0%b2%b2%e0%b3%81-%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b9%e0%b2%a6%e0%b2%bf%e0%b2%82%e0%b2%a6-%e0%b2%aa%e0%b3%8d