ಅಲೆಮಾರಿ, ಅರೆ ಅಲೆಮಾರಿ  ಜನಾಂಗದವರಿಗೆ ಸರ್ಕಾರದ ಸೌಲಭ್ಯ ಒದಗಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.

20231115_113524
Published on

ಗದಗ: ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವಿವಿಧ ಇಲಾಖೆಗಳು ಕೈ ಜೋಡಿಸಬೇಕು. ವಿವಿಧ ಯೋಜನೆಗಳಡಿ ಈ ಜನಾಂಗದವರಿಗೆ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಿದ ಅಲೆಮಾರಿ, ಅರೆಅಲೆಮಾರಿ ಜನಾಂಗದವರ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ನಿವೇಶನ ಹೊಂದಿದವರಿಗೆ ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾತಿಗೆ ಕ್ರಮ ವಹಿಸಬೇಕು. ತಾಲೂಕಾವಾರು ಸರ್ವೆ ನಡೆಸಿ  ಅವರಿಗೆ ಯೋಜನೆಗಳ ಸೌಲಭ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸೂಚಿಸಿದರು.    

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್ ಅವರು ಮಾತನಾಡಿ ಇಲಾಖೆಯಿಂದ ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗಾಗಿ  ಮಾಧ್ಯಮಿಕ/ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ,  ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಜಮೀನು ಖರೀದಿ, ವಸತಿ ಸೌಲಭ್ಯ, ಅಲೆಮಾರಿ, ಅರೆಅಲೆಮಾರಿ ಜನಾಂಗದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.  

ಇಲಾಖೆಯಿಂದ ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ  ಮೆಟ್ರಿಕ್ ಪೂರ್ವ ಶಿಷ್ಯವೇತನ   ಪ್ರತಿ ಮಾಹೆಯ 200 ರೂ.  ನೀಡಲಾಗುತ್ತಿದೆ.  ಜಿಲ್ಲೆಯಲ್ಲಿ  2022-23 ನೇ ಸಾಲಿನ ಅಲೆಮಾರಿ/ ಅರೆ ಅಲೆಮಾರಿ ಜನಾಂಗದ 614 ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ  12,28,000/- ರೂ.ಗಳನ್ನು ಮಂಜೂರು ಮಾಡಲಾಗಿದೆ.  2022-23 ನೇ ಸಾಲಿನಲ್ಲಿ  189  ವಿದ್ಯಾರ್ಥಿಗಳಿಗೆ  685000 ರೂ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ  ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.  

ಅಲೆಮಾರಿ/ ಅರೆ ಅಲೆಮಾರಿ ಜನಾಂಗದದ  ನಿವೇಶನ ರಹಿತರಿಗೆ ಹಾಗೂ ಗುಡಿಸಲುಗಳಲ್ಲಿ ವಾಸಿಸುತ್ತಿರುವವರಿಗೆ ನಿರ್ದಿಷ್ಟ ನೆಲೆಯಿಲ್ಲದೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವವರಿಗೆ ಒಂದೇ ಕಡೆ ನೆಲೆ ನಿಲ್ಲುವಂತೆ ಮಾಡುವದಕ್ಕೋಸ್ಕರ ವಸತಿ ಸೌಲಭ್ಯ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಸಭೆಗೆ ತಿಳಿಸಿದರು.  

ತಾಲೂಕುವಾರು ಸರ್ವೆ ಪ್ರಕಾರ ಜಿಲ್ಲೆಯಲ್ಲಿ 1687 ಅಲೆಮಾರಿ/ ಅರೆ ಅಲೆಮಾರಿ ಜನಾಂಗಗಳ ಕುಟುಂಬಗಳಿದ್ದು ಆ ಪೈಕಿ 757 ಕುಟುಂಬಗಳಿಗೆ ಸ್ವಂತ ಮನೆಗಳಿವೆ. 930 ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು 57 ಕುಟುಂಬಗಳು ನಿವೇಶನ ಹೊಂದಿದವರಾಗಿದ್ದಾರೆ. ನಿವೇಶನ ಇಲ್ಲದ  873 ಕುಟುಂಬಗಳಿವೆ ಎಂದು ಸಭೆಗೆ ತಿಳಿಸಿದರು.  

ಸಭೆಯಲ್ಲಿ ವಸತಿ ಯೋಜನೆಯಡಿ ಜಿಲ್ಲೆಗೆ ಮನೆಗಳ ಗುರಿಯನ್ನು ಮರು ನಿಗದಿಪಡಿಸುವ ಕುರಿತು ಹಾಗೂ ಗೊಲ್ಲಸಮುದಾಯದ ಅಲೆಮಾರಿ /ಅರೆಅಲೆಮಾರಿ ವಸತಿರಹಿತರಿಗೆ  2021-22 ನೇ ಸಾಲಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ತಾಲೂಕಾ ಮಟ್ಟದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಲೆಮಾರಿ/ಅರೆ ಅಲೆಮಾರಿ ಸಮುದಾಯದ ಪ್ರತಿನಿಧಿಗಳಾದ  ವಿಠಲ ಗಣಾಚಾರಿ, ಹರೀಶ ಪೂಜಾರ, ಕೆಂಚಪ್ಪ ಹೆಳವರ ಸಲಹಾ ಸಮಿತಿ ಸದಸ್ಯರು  ಇದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net