ಜನರ ನೆಮ್ಮದಿ ಹಾಳುಮಾಡಿದ ಆಲೆಮನೆ: ಅಳಲು ತೋಡಿಕೊಂಡ ದೊಡ್ಡಬ್ಯಾಡರಹಳ್ಳಿ ಗ್ರಾಮಸ್ಥರು

Alemane Problem Mandya
Published on

ಮಂಡ್ಯ: ಪಾಂಡವಪುರ ತಾಲೂಕು ಕಸಬಾ ಹೋಬಳಿ ದೊಡ್ಡಬ್ಯಾಡರಹಳ್ಳಿ ಹಾಗೂ ತಿಮ್ಮನಕೊಪ್ಪಲು ಗ್ರಾಮದ ಮಧ್ಯೆ ಭಾಗದಲ್ಲಿರುವ ಆಲೆಮನೆಯಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹಲವು ವರ್ಷದಿಂದ ದೂರು ಕೊಟ್ಟರೂ ಯಾರೊಬ್ಬರೂ ಕ್ರಮ ವಹಿಸುತ್ತಿಲ್ಲ. ಇದೇ ರೀತಿ ನಿರ್ಲಕ್ಷೃ ವಹಿಸುತ್ತಿದ್ದರೆ ನ್ಯಾಯಾಲಯದ ಮೋರೆ ಹೋಗುವುದಾಗಿ ದೊಡ್ಡಬ್ಯಾಡರಹಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಬಿ.ಸಿ.ನಿಂಗೇಗೌಡ, ದೊಡ್ಡಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ಖಾತೆ ಸಂಖ್ಯೆ 319ರಲ್ಲಿ ಲಲಿತಾ ಕೋಂ ನಿಂಗಣ್ಣ, ಕಾಳೇಗೌಡ ಬಿಎನ್ ಕರೀಗೌಡ ಎಂಬುವರು ಹಿಟ್ಟಿನ ಗಿರಣಿ ಎಂಬುದಾಗಿ ಪರವಾನಗಿ ಪಡೆದು ಅಕ್ರಮವಾಗಿ ಆಲೆಮನೆ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಸರ್ಕಾರಿ ಇಲಾಖೆಗಳ ಅನುಮತಿ ಪಡೆಯದೆ ಆಲೆಮನೆ ನಡೆಸುತ್ತಿರುವ ಮಾಲೀಕರು ಪರಿಸರ ನೈರ್ಮಲ್ಯಕ್ಕೆ ಧಕ್ಕೆ ಉಂಟುಮಾಡಿ ನೆರೆ ಹೊರೆಯ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಗ್ರಾಪಂ ಪಿಡಿಒ ಇದನ್ನು ಕಂಡೂ ಕಾಣದಂತೆ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಆಲೆಮನೆಯಲ್ಲಿ ತ್ಯಾಜ್ಯವಸ್ತುಗಳಾದ ಕಬ್ಬಿನ ಸಿಪ್ಪೆ, ಕೊಳಚೆ ಸಿಪ್ಪೆ, ಪ್ಲಾಸ್ಟಿಕ್, ಟೈಯರ್ ಸೇರಿದಂತೆ ಇತರೆ ಕೊಳೆತ ವಸ್ತುಗಳ ಬಳಕೆಯಿಂದ ನೈರ್ಮಲ್ಯ ಕಲುಷಿತವಾಗಿದ್ದು, ಇದರಿಂದ ನೆರೆಹೊರೆಯ ನಿವಾಸಿಗಳಿಗೆ ಬಿಪಿ, ಮಧುಮೇಹ, ಶ್ವಾಸಕೋಶ ಕಾಯಿಲೆಗಳು ಹಾಗೂ ಚರ್ಮರೋಗ ಬರಲಾರಂಭಿಸಿವೆ ಎಂದು ಅಳಲು ತೋಡಿಕೊಂಡರು.

ಗ್ರಾಮಸ್ಥ ಬಿ.ನಿಂಗೇಗೌಡ ಮಾತನಾಡಿ, ಸಾರ್ವಜನಿಕರು ತಿರುಗಾಡುವ ವೇಳೆ ಕೆಟ್ಟ ವಾಸನೆ ಬರುತ್ತದೆ. ಸಮಸ್ಯೆ ಬಗ್ಗೆ ಹಲವು ಇಲಾಖೆ, ಜಿಲ್ಲಾಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಗ್ರಾಪಂ ಪಿಡಿಒ ಬಸವರಾಜು ಪರಿಸರ ಹಾನಿ ಸಂಬಂಧ ಕ್ರಮ ವಹಿಸದೆ, ಆಲೆಮನೆ ಮಾಲೀಕರ ಪರ ವಕಾಲತ್ತು ವಹಿಸುತ್ತಾರೆ. ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದರೆ ಹೈಕೋರ್ಟ್‌ನಲ್ಲಿ ಧಾವೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net