

ಸಿದ್ದಾಪುರ: ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯವಾದ ಗೋಸ್ವರ್ಗದಲ್ಲಿ ಜ. 16ರ ವರೆಗೂ ಜರುಗುತ್ತಿರುವ ಗೋದಿನ ಮತ್ತು ಗೋವಿಗಾಗಿ ಆಲೆಮನೆ ಕಾರ್ಯಕ್ರಮವು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮವು ಸಂಪೂರ್ಣ ಸಾವಯವ ಮೂಲದ್ದಾಗಿದೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟಾ ಹೇಳಿದರು.
ತಾಲೂಕಿನ ಭಾನ್ಕುಳಿಯ ಗೋ ಸ್ವರ್ಗದಲ್ಲಿ ಹಮ್ಮಿಕೊಂಡಿದ್ದ ಗೋ ದಿನ ಮತ್ತು ಗೋವಿಗಾಗಿ ಆಲೆಮನೆ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೋವಿಗಾಗಿಯೇ ಸಮರ್ಪಿತವಾದ ಈ ಕಾರ್ಯಕ್ರಮ ದೇಶೀಯ ಗೋವಿನ ಸಂರಕ್ಷಣೆಯ ಪ್ರಮುಖ ಉದ್ದೇಶ ಹೊಂದಿದೆ ಎಂದರು.
ಉದ್ಯಮಿ ಭೀಮರಾಜ ಪಟೇಲ, ಗೋ ದಿನ ಸಮಿತಿ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಲಕ್ಷ್ಮೀಕಾಂತ ಪೈ, ಸರ್ವ ಸಂಯೋಜಕ ಶಾಂತಾರಾಮ ಹಿರೇಮನೆ, ಸಂಘಟಕ ರಮಾನಂದ ತಲವಾಟ, ಇತರರಿದ್ದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಗೋ ಸಮಿತಿಯ ಅಧ್ಯಕ್ಷ ಎಂ.ಜಿ. ರಾಮಚಂದ್ರ ಜ. 14ರಂದು ವೃತ್ತಿಪರರ ಸಮ್ಮಿಲನ, ಕಾಮಧೇನು ಹವನ, ಗೋಮಾತೆಗೆ ಅಷ್ಟಾಂಗ ಸೇವೆ, ಗೋವಿಗೆ ಹೋಳಿಗೆಯೊಂದಿಗೆ ಭಕ್ಷ್ಯಗಳ ಸಂತರ್ಪಣೆ ಮತ್ತು ವಿಶೇಷವಾಗಿ ಒಂದು ಸಾವಿರ ತುಪ್ಪದ ದೀಪ ಬೆಳಗುವ ಮೂಲಕ ಗೋಗಂಗಾರತಿ ಹಮ್ಮಿಕೊಳ್ಳಲಾಗಿದೆ ಎಂದರು.
ಬಳಿಕ ಮನು ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಿತಿನ್ ಕಲಗದ್ದೆ, ಡಾ. ಸಮೀರ ಬಾದ್ರಿ ಇತರರು ಸಹಕರಿಸಿದರು.