ಮದ್ಯವ್ಯಸನ ಕುಟುಂಬ, ಸಮಾಜಕ್ಕೆ ಮಾರಕ

7SPT1
Published on

ಸೋಮವಾರಪೇಟೆ: ಮದ್ಯವ್ಯಸನ ಇಡೀ ಕುಟುಂಬ ಹಾಗೂ ಸಮಾಜಕ್ಕೆ ಮಾರಕ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೊಡವ ಸಮಾಜ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಾಂಧಿ ಸ್ಮತಿ, ಜನಜಾಗೃತಿ ಜಾಥಾ ಹಾಗೂ ನವಜೀವನ ಸಮಿತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದುಶ್ಚಟ ಮುಕ್ತ ಸಮಾಜ ನಿರ್ಮಾಣದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಮದ್ಯಪಾನದಂತಹ ದುಶ್ಚಟವನ್ನು ಮದ್ಯವರ್ಜನ ಶಿಬಿರದ ಮೂಲಕ ಹೋಗಲಾಡಿಸುವ ಮೂಲಕ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿರುವುದು ಶ್ಲಾಘನೀಯ ಎಂದರು.


ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ 36 ಜಿಲ್ಲಾವೇದಿಕೆಗಳನ್ನು ಸ್ಥಾಪಿಸಿ ಸ್ವಯಂಸೇವಕರ ಮುಖಂಡತ್ವದಲ್ಲಿ ಲಕ್ಷಾಂತರ ಮದ್ಯವ್ಯಸನಿಗಳನ್ನು ಮನಪರಿವರ್ತನೆಗೊಳಿಸಿ ನೆಮ್ಮದಿಯಿಂದ ಬದುಕಲು ಕಾರಣೀಭೂತರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ, ಗಾಂಧಿ ಕಂಡ ಕನಸನ್ನು ನನಸು ಮಾಡುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ರಾಜ್ಯ ಸರ್ಕಾರದ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಪ್ರಸ್ತಾಪವನ್ನು ವಿರೋಧಿಸಬೇಕಾದ ಅಗತ್ಯತೆ ಇದೆ. ಯಾವುದೇ ಸರ್ಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಅಬಕಾರಿ ನಿರೀಕ್ಷಕ ಲೋಕೇಶ್, ರಾಷ್ಟ್ರೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಸುರೇಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಚಂದ್ರಮೋಹನ್, ಉದ್ಯಮಿ ಭಗವಾನ್, ಸೋಮೇಶ್, ಜಿಲ್ಲಾ ನಿರ್ದೆಶಕ ಲೀಲಾವತಿ, ಯೋಜನಾಧಿಕಾರಿ ರೋಹಿತ್ ಇದ್ದರು.


ಗಾಂಧಿ ಪ್ರತಿಮೆ ಬಳಿಯಿಂದ ತಾಲೂಕು ಕಚೇರಿಯವರೆಗೆ ಜನಜಾಗೃತಿ ಜಾಥಾ ನಡೆಯಿತು. ಮದ್ಯಪಾನವನ್ನು ತೊಲಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net