ಸಪ್ತ ವ್ಯಸನಗಳಲ್ಲಿ ಮದ್ಯಪಾನವೆಂಬುದು ಮೊದಲ ಮೆಟ್ಟಿಲು: ಇದರಲ್ಲಿ ಜಾರಿದರೆ, ಉಳಿದ ಎಲ್ಲದರಲ್ಲೂ ಉರುಳಿ ಬಿದ್ದಂತೆ

002
Published on

ಚಿಕ್ಕಬಳ್ಳಾಪುರ: ಮದ್ಯ ವ್ಯಸನಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಮಿತಿಯ ಬೆಂಗಳೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಎಂ.ಶೀನಪ್ಪ ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರದಲ್ಲಿನ ರಾಮನುಜ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಮಿತಿ  ಕೈಗೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಪ್ತ ವ್ಯಸನಗಳಲ್ಲಿ ಮದ್ಯಪಾನವೆಂಬುದು ಮೊದಲ ಮೆಟ್ಟಿಲು. ಇದರಲ್ಲಿ ಜಾರಿದರೆ, ಉಳಿದ ಎಲ್ಲದರಲ್ಲೂ ಉರುಳಿ ಬಿದ್ದಂತೆ ಎಂಬುದಾಗಿ ಹೇಳಿದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ ಸಂದೇಶವನ್ನು ಅರಿತುಕೊಳ್ಳಬೇಕು ಎಂದರು.

ಜನಜಾಗೃತಿ ವೇದಿಕೆಯು ಮದ್ಯವರ್ಜನ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದು ಶ್ಲಾನೀಯ. ಇದು ವ್ಯಸನಿಗಳು ಪಾನಮುಕ್ತ ಜೀವನವನ್ನು ನಡೆಸುವಂತಾಗಲು ಪ್ರೋತ್ಸಾಹಿಸುವಲ್ಲಿ ಸಹಕಾರಿ ಎಂದರು.

ಕರ್ನಾಟಕದಲ್ಲಿ 1826 ಮಧ್ಯವರ್ಜನ ಶಿಬಿರಗಳ ಮೂಲಕ 1 ಲಕ್ಷಕ್ಕೂ ಹೆಚ್ಚಿನ ಜನರನ್ನು ಮದ್ಯಪಾನ ಮುಕ್ತಗೊಳಿಸುವ ಸಂಕಲ್ಪವನ್ನು ಧರ್ಮಾಧಿಕಾರಿಗಳು ಹೊಂದಿದ್ದಾರೆ ಎಂದು ತಿಳಿಸಿದರು.

ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್​, ದುಶ್ಚಟಗಳ ಮುಕ್ತ ಜೀವನವು ನೆಮ್ಮದಿದಾಯಕ ಎಂದರು.

ಧರ್ಮಸ್ಥಳ ಯೋಜನಾ ಸಮಿತಿಯ ಜಿಲ್ಲಾ ನಿರ್ದೇಶಕ ಪ್ರಶಾಂತ್​ ಮಾತನಾಡಿ, ಗ್ರಾಮಾಭಿವೃದ್ಧಿ ಸಮಿತಿಯು ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದರು.

ಸಮಿತಿಯ ಅಧ್ಯಕ್ಷ ಸಿ.ವೆಂಕಟೇಶ್​ ಮಾತನಾಡಿ, ಮದ್ಯವರ್ಜನ ಶಿಬಿರವು ಮತ್ತು ಜಾಗೃತಿ ಪುಣ್ಯದ ಕೆಲಸ. ಇನ್ನೂ ಸ್ವಸಹಾಯ ಸಂಘಗಳ ಮೂಲಕ ಕುಟುಂಬಗಳ ಆರ್ಥಿಕ ಸಬಲೀಕರಣ, ಧಾರ್ಮಿಕ ಕ್ಷೇತ್ರಗಳಿಗೆ, ಹೈನುಗಾರಿಕೆ, ಸುಜ್ಞಾನನಿಧಿ, ಜ್ಞಾನವಿಕಾಸ, ಕೆರೆ ಹೂಳೆತ್ತಲು ನೆರವು ಸೇರಿದಂತೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಜೆ.ಎನ್​.ಮುನಿರಾಜು, ನವೀನ್​ ಕುಮಾರ್​, ಚಿಕ್ಕ ಅಂಜನಪ್ಪ, ದೇವರಾಜು, ಕೃಷ್ಣಪ್ಪ, ಈಶ್ವರ್​, ಕ್ಷೇತ್ರ ಯೋಜನಾಧಿಕಾರಿ ಧನಂಜಯ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net